ಕೋವಿಡ್ ಸಾಂಕ್ರಾಮಿಕದಿಂದಾಗಿ ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಡೋಲೋ-650 ಮಾತ್ರೆ

Update: 2022-01-17 11:05 GMT

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಅತ್ಯಂತ ಹೆಚ್ಚು ಮಾರಾಟವಾದ ಮೇಡ್ ಇನ್ ಇಂಡಿಯಾ ಪ್ಯಾರಾಸಿಟಾಮಾಲ್ ಟ್ಯಾಬ್ಲೆಟ್ ಡೋಲೋ-650 ಇತರ ಪ್ಯಾರಾಸಿಟಮಾಲ್ ತಯಾರಕರನ್ನು ಹಿಂದಿಕ್ಕಿದೆ.

ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ಈ ಮಾತ್ರೆಯ ಉತ್ಪಾದಕ ಸಂಸ್ಥೆಯಾಗಿದ್ದು  ಜನವರಿ 2020ರಿಂದೀಚೆಗೆ ಸಂಸ್ಥೆಯ ಮಾರಾಟ ರೂ 560 ಕೋಟಿ ಗಡಿ ದಾಟಿದೆ. ಇತರ ಪ್ಯಾರಾಸಿಟಮಾಲ್ ಮಾತ್ರೆ ತಯಾರಕ ಸಂಸ್ಥೆಗಳಾದ ಜಿಎಸ್‍ಕೆ ಫಾರ್ಮಾದ ಕ್ಯಾಲ್ಪೋಲ್, ಸುಮೋ ಎಲ್ ಮತ್ತು ಸುಮಾರು 40 ಇತರ ಬ್ರ್ಯಾಂಡ್‍ಗಳನ್ನು ಡೋಲೋ ಹಿಂದಿಕ್ಕಿದೆ.

ಇದೀಗ ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಡೋಲೋ 650 ಮಾರಾಟ ಇನ್ನೂ ಏರಿಕೆಯಾಗಿದ್ದು ಡಿಸೆಂಬರ್ 2021 ತಿಂಗಳಿನಲ್ಲಿ ಸಂಸ್ಥೆ ರೂ 28.9 ಕೋಟಿ ಮೌಲ್ಯದ ಮಾತ್ರೆಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿನ ಮಾರಾಟಕ್ಕಿಂತ ಇದು ಶೇ 60ರಷ್ಟು ಹೆಚ್ಚಾಗಿದೆ.

ವೈದ್ಯರೂ ಹೆಚ್ಚಾಗಿ ಜ್ವರ ಪೀಡಿತರಿಗೆ ಡೋಲೋ ಮಾತ್ರೆಗಳನ್ನೇ ಪ್ರಿಸ್ಕ್ರಿಪ್ಶನ್ ನೀಡುತ್ತಾರೆ. ತಜ್ಞರ ಪ್ರಕಾರ  ಮುಂದಿನ ದಿನಗಳಲ್ಲಿ ಪ್ಯಾರಾಸಿಟಮಾಲ್ ಹೇಳುವ ಬದಲು ಜನರು ಡೋಲೋ ಹೇಳುವ ದಿನಗಳು ದೂರವಿಲ್ಲ.

ಡೋಲೋ ಮಾರಾಟ ದಾಖಲೆ ತಲುಪುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ಹಲವರು ಸ್ವಾರಸ್ಯಕರ ಪ್ರತಿಕ್ರಿಯೆಗಳನ್ನು ಮಾಡಿದ್ದಾರೆ. ಡೋಲೋ ಕೋವಿಡ್ ಸಂದರ್ಭ ಭಾರತದ ಅಚ್ಚುಮೆಚ್ಚಿನ ಸ್ನ್ಯಾಕ್ ಆಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News