ಮೇಕೆದಾಟು ಪಾದಯಾತ್ರೆಯಿಂದ ತಮಿಳುನಾಡಿಗೆ ಅನುಕೂಲ: ಸಚಿವ ಆರ್.ಅಶೋಕ್

Update: 2022-01-17 13:22 GMT

ಬೆಂಗಳೂರು, ಜ. 17: ‘ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಿಂದ ಕರ್ನಾಟಕ ರಾಜ್ಯಕ್ಕೆ ಅನುಕೂಲ ಆಗುವ ಬದಲಿಗೆ ತಮಿಳುನಾಡಿಗೆ ಅನುಕೂಲವಾಗುವ ಸಾಧ್ಯತೆಯೇ ಹೆಚ್ಚು' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಪಾದಯಾತ್ರೆ ಅಥವಾ ಹೋರಾಟದಿಂದ ನೀರಾವರಿ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಎಸ್ಸೆಂ ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದರು. ಆದರೆ, ನ್ಯಾಯಾಲಯ ಛೀಮಾರಿ ಹಾಕಿತು ಎಂದು ಉಲ್ಲೇಖಿಸಿದರು.

ಯಾವುದೇ ಹೋರಾಟಗಳಿಂದ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಅಥವಾ ಒತ್ತಡ ಹಾಕಲು ಸಾಧ್ಯವಿಲ್ಲ. ಮೇಕೆದಾಟು ಅಣೆಕಟ್ಟು ವಿಚಾರದಲ್ಲೂ ಹೋರಾಟ ಮಾಡಿದರೆ ರಾಜ್ಯಕ್ಕೆ ಲಾಭ ಆಗುವ ಬದಲಿಗೆ ತಮಿಳುನಾಡಿಗೆ ಅನುಕೂಲವಾಗಲಿದೆ. ಕೃಷಿ ಉದ್ದೇಶಕ್ಕಾಗಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ ಎಂದು ತಮಿಳುನಾಡು ಆಕ್ಷೇಪಿಸುತ್ತಿದೆ ಎಂದು ಅಶೋಕ್ ತಿಳಿಸಿದರು.

ನಮ್ಮ ಎಲ್ಲ ಪ್ರತಿಕ್ರಿಯೆಗಳನ್ನು ದಾಖಲಿಸಿ ತಮಿಳುನಾಡು ನ್ಯಾಯಾಲಯದಲ್ಲಿ ಧಾವೆ ಹೂಡುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಪಾದಯಾತ್ರೆಗೂ ಮುನ್ನ ಈ ವಿಚಾರಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿತ್ತು. ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇದ್ದರೂ ಆ ಬಗ್ಗೆ ಗಮನ ಕೊಡದೇ ಹೋರಾಟ ಮಾಡಿದರೆ ರಾಜ್ಯ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಮೇಕೆದಾಟು ಅಣೆಕಟ್ಟು ನಿರ್ಮಿಸಲು ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡಿದ್ದು ತಮಿಳುನಾಡು ವಿರುದ್ಧವೋ ಅಥವಾ ನ್ಯಾಯಾಲಯದ ವಿರುದ್ಧವೊ ಎಂಬುದನ್ನು ಸ್ಪಷ್ಟಪಡಿಸಲಿ. ಕಾಂಗ್ರೆಸ್‍ನವರು ಬೆಟ್ಟ ಅಗೆದು ಇಲಿಯನ್ನೂ ಸಹಿತ ಹಿಡಿಯಲು ಸಾಧ್ಯವಾಗಲಿಲ್ಲ. ಇದೀಗ ಪಾದಯಾತ್ರೆ ಕ್ರೆಡಿಟ್ ಪಡೆದುಕೊಳ್ಳಲು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News