ಮನುಷ್ಯ ಕೇವಲ ತನ್ನ ಸ್ವಾರ್ಥಕ್ಕಾಗಿ ಪರಿಸರ ಬಳಸಿಕೊಳ್ಳುವುದು ಸಲ್ಲದು: ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ

Update: 2022-01-17 17:31 GMT

ಶಿವಮೊಗ್ಗ, ಜ.17: ಭಗವಂತ ಸಕಲ ಜೀವ-ಜಂತುಗಳಿಗಾಗಿ ಪರಿಸರ ಸೃಷ್ಟಿಸಿದ್ದಾನೆ. ಮನುಷ್ಯ ಕೇವಲ ತನ್ನ ಸ್ವಾರ್ಥತೆಗಾಗಿ ಪರಿಸರ ಬಳಸಿಕೊಳ್ಳುವುದು ಸಲ್ಲದು. ಮನಷ್ಯ ಮಾಡುವ ಪರಿಸರ ಮಾಲಿನ್ಯದಿಂದಾಗಿ ಬೇರೆ ಜೀವಿಗಳಿಗೆ ತೊಂದರೆಯಾಗಬಾರದು ಎಂದು ಪದ್ಮಶ್ರೀ ಪುರಸ್ಕೃತೆ, ವೃಕ್ಷ ಮಾತೆ ತುಳಸಿಗೌಡ ಹೇಳಿದರು.

ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡದ ವತಿಯಿಂದ ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಕ್ಯಾದಿಗೆಕಟ್ಟೆ ಕೆರೆ ಆವರಣದಲ್ಲಿ ಜನವರಿ 17ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೆರೆ ಹಬ್ಬ ಹಾಗೂ ಪದ್ಮಶ್ರೀ ತುಳಸಿಗೌಡ ಉದ್ಯಾನವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಜಲಮೂಲ ಸಂರಕ್ಷಣೆಯಿಂದ ಪ್ರತಿ ಜೀವಿಗೂ ಅನುಕೂಲವಾಗಲಿದೆ. ಮನಷ್ಯ ತಾನೂ ಬದುಕಿ ಇತರೆ ಜೀವಿಗಳಿಗೂ ಬದುಕಲು ಬಿಡಬೇಕೆಂದರು. 

ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಭಾವನೆಯನ್ನು ಭಾಷೆಯ ಮೂಲಕ ಸಡಿಲಗೊಳಿಸಬಾರದು. ಮಾತು ಕಡಿಮೆಯಾದಾಗ ಸಾಧನೆ ದೊಡ್ಡದಾಗುತ್ತದೆ. ತುಳಸಿ ಗೌಡರಿಗೆ ಮಾತಿನ ಚಾತುರ್ಯ ಇಲ್ಲದಿದ್ದರೂ ಅವರ ಭಾವನೆ ಮುಖದ ಮೇಲೆ ಬಿಂಬಿತವಾಗುತ್ತದೆ. ಇವರು ಸುಮಾರು 16 ಲಕ್ಷ ಗಿಡಗಳನ್ನು ಬೆಳೆಸುವ ಮೂಲಕ ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ನಗರ ಭಾಗದಲ್ಲಿ ಕೆರೆಗಳನ್ನು ಸೈಟ್ ಮಾಡಿ ಮಾರುವುದೇ ಹೆಚ್ಚು. ಆದರೆ ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡದವರು ಕರ್ತವ್ಯ ಪ್ರಜ್ಞೆಯಿಂದ ಕ್ಯಾದಿಗೆಕಟ್ಟೆ ಕೆರೆಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಈ ತಂಡದಲ್ಲಿ ಯಾವುದೇ ಪದಾಧಿಕಾರಿಗಳಿಲ್ಲ. ಇವರು ಕರ್ತವ್ಯ ಪ್ರಜ್ಞೆಯಿಂದ ಕೆರೆ ಪುನರುತ್ಥಾನಗೊಳಿಸಿದ್ದಾರೆ. ಇವರ ಶ್ರಮ ಸಾರ್ಥಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಹೊಸನಗರದ ಮೂಲೆಗದ್ದೆ ಅಭಿನವ ಚೆನ್ನಬಸವ ಸ್ವಾಮೀಜಿ, ದೇವರನ್ನು ಹುಡುಕಿಕೊಂಡು ಎಲ್ಲಿಯೋ ಹೋಗಬೇಕಿಲ್ಲ. ಪರಿಸರ ಆರಾಧನೆಯೇ ಭಗವಂತನ ಆರಾಧನೆಯಾಗಿದೆ. ಪುಟ್ಟ ಹಳ್ಳಿಯಲ್ಲಿ ಇಂತಹ ಆರಾಧನೆಯ ಕೈಂಕರ್ಯ ನಡೆಸಿದ ತುಳಸಿ ಗೌಡ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೂಲಕ ದೇಶವೇ ಗುರುತಿಸುವಂತಾಗಿದ್ದಾರೆ ಎಂದರು.

ಅರ್ಥಶಾಸ್ತ್ರಜ್ಞ ಹಾಗೂ ಪರಿಸರ ಚಿಂತಕ ಪ್ರೊ.ಬಿ.ಎಂ.ಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಎಸ್.ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಭಾರತಿ ಚಂದ್ರಶೇಖರ್ ಪ್ರಾರ್ಥಿಸಿ, ತ್ಯಾಗರಾಜ್ ಮಿತ್ಯಂತ ಸ್ವಾಗತಿಸಿ, ಉಮೇಶ್ ಪ್ರಾಸ್ತಾವಿಸಿ, ಅನಿಲ್ ಶೆಟ್ಟರ್ ವಂದಿಸಿದರು. ಖ್ಯಾತ ಗಾಯಕಿ ಸುರೇಖಾ ಹೆಗಡೆ ಅವರಿಂದ ಪರಿಸರ ಗೀತೆಗಳ ಅರುಣ ರಾಗ ಗಾಯನ ನಡೆಸಿಕೊಟ್ಟರು.

ಇದಕ್ಕೂ ಮುನ್ನ ಸಂಸದ ಬಿ.ವೈ.ರಾಘವೇಂದ್ರ ಅವರು ಕೆರೆಗೆ ಗಂಗಾ ಪೂಜೆ, ಬಾಗೀನ ರೂಪದಲ್ಲಿ ಮೀನಿನ ಮರಿಗಳ ಸಪರ್ಮಣೆ, ಪದ್ಮಶ್ರೀ ಪುರಸ್ಕøತ ತುಳಸಿಗೌಡ ಉದ್ಯಾನವನ ಲೋಕಾರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಂಸದರು ತುಳಸಿಗೌಡ ಅವರಿಗೆ ಹಾಗೂ ಕ್ಯಾದಿಗೆಕೆರೆ ನಿರ್ವಹಣೆಗೆ ತಲಾ 2 ಲಕ್ಷ ರೂ. ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News