ಆರೆಸ್ಸೆಸ್‌ ಮುಖ್ಯಸ್ಥ ಭಾಗವತ್‌ ರೊಂದಿಗೆ ಕುಳಿತಿರುವ ಅಸದುದ್ದೀನ್‌ ಉವೈಸಿ ಫೋಟೊ ವೈರಲ್:‌ ಸತ್ಯಾಂಶವೇನು?

Update: 2022-01-18 17:43 GMT

ಹೊಸದಿಲ್ಲಿ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರೊಂದಿಗೆ ಎಐಎಮ್‌ಐಎಮ್‌ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಸಭೆ ನಡೆಸಿದ್ದಾರೆಂದು ಹೇಳಿಕೊಳ್ಳುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ವೈರಲ್‌ ಆಗಿರುವ ಚಿತ್ರದಲ್ಲಿ ಮೋಹನ್‌ ಭಾಗವತ್‌ ಪಕ್ಕದಲ್ಲಿ ಓವೈಸಿ ಕುಳಿತುಕೊಂಡಿರುವುದು ಕಾಣಬಹುದು. ಈ ಫೋಟೋವನ್ನು ಎಐಎಮ್‌ಐಎಮ್‌ ಬಿಜೆಪಿಯ ಬಿ ಟೀಂ ಎಂಬುದಕ್ಕೆ ಪುರಾವೆಯೆಂಬಂತೆ ವೈರಲ್‌ ಮಾಡಲಾಗುತ್ತಿದೆ. 

ಆದರೆ, Factly.in ಫ್ಯಾಕ್ಟ್‌ ಚೆಕ್‌ ತಂಡ ಈ ಚಿತ್ರವನ್ನು ಪರಿಶೀಲಿಸಿದಾಗ ಇದು ಎಡಿಟೆಡ್‌ ಚಿತ್ರವೆಂಬುದು ಬಯಲಾಗಿದೆ. ಮೂಲ ಚಿತ್ರದಲ್ಲಿ ಮೋಹನ್‌ ಭಾಗವತ್‌ ಪಕ್ಕದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಕುಳಿತಿದ್ದಾರೆ. ಮುಲಾಯಂ ದೇಹದ ಭಾಗಕ್ಕೆ ಒವೈಸಿ ಚಿತ್ರವನ್ನು ಕತ್ತರಿಸಿ ಅಂಟಿಸಲಾಗಿದ್ದು, ಆರ್‌ಎಸ್‌ಎಸ್‌ ಮುಖ್ಯಸ್ಥರೊಂದಿಗೆ ಓವೈಸಿ ಸಭೆ ನಡೆಸುತ್ತಿದ್ದಾರೆಂಬ ಸುಳ್ಳು ಒಕ್ಕಣೆಯೊಂದಿಗೆ ವೈರಲ್‌ ಮಾಡಲಾಗುತ್ತಿದೆ. 

ಮೂಲ ಚಿತ್ರವು ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕೃತ ನಿವಾಸದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ತೆಗೆದ ಚಿತ್ರವಾಗಿದ್ದು, ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News