ಶಿವಮೊಗ್ಗ: ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

Update: 2022-01-17 18:05 GMT

ಶಿವಮೊಗ್ಗ, ಜ.17: ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ಧ ಚಿತ್ರಕ್ಕೆ ಅವಕಾಶ ನೀಡಿ ಗುರುಗಳಿಗೆ ಗೌರವ ನೀಡಬೇಕೆಂದು  ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಘಟಕ ಆಗ್ರಹಿಸಿದೆ.

ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ಧ ಚಿತ್ರವನ್ನು ಕೇಂದ್ರ ಗಣರಾಜ್ಯೋತ್ಸವದ ಆಯ್ಕೆ ಸಮಿತಿ ನಿರಾಕರಿಸಿರುವುದಕ್ಕೆ ಮನವಿಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ.

ವಿಧ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ಸಾರಿದ ಸಂತ, ಮಾನವತಾವಾದಿ, ಸಮಾಜ ಸುಧಾರಕ, ಹಿಂದುಳಿದ ವರ್ಗಗಳ ಶೋಷಿತ ವರ್ಗಗಳ ತುಳಿತಕ್ಕೆ ಒಳಗಾದ ಸಮುದಾಯದವರನ್ನು ಮೇಲೆತ್ತಿದವರು ಮತ್ತು ಅವರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿದವರು ಬ್ರಹ್ಮ ಶ್ರೀ ನಾರಾಯಣ ಗುರುಗಳು.ಹಾಗೂ ಅಕ್ಷರ ಬ್ರಹ್ಮ ಎಂದೆ ಜನಮಾನಸದಲ್ಲಿ ಮನೆಮಾತಾಗಿರುವ, ಬ್ರಹ್ಮರ್ಷಿ ನಾರಾಯಣ ಗುರುಗಳೆಂಬ ಬೆಳಕು ಕೇರಳದ ಮೂಲಕ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ, ಸರ್ವ ಧರ್ಮಗಳ ಜನರು ಸಹ ಬಾಳ್ವೆಗಳ ಮೂಲಕ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು, ಮನುಷ್ಯ ಕುಲಂ ತಾನೊಂದೇ ವಲಂ ಎನ್ನುವ ಆದಿಕವಿ ಪಂಪನ ಮಾತುಗಳನ್ನು ತಮ್ಮ ಧಾರ್ಮಿಕ ತತ್ವಾದರ್ಶಗಳ ಮೂಲಕ ನನಸು ಮಾಡುತ್ತ ಹೆಸರಾದ ಬ್ರಹ್ಮರ್ಷಿ ನಾರಾಯಣ ಗುರುಗಳು ಜಗಕೆ ತೋರಿದ ಬೆಳಕನ್ನು ಮರೆಯೋದುಂಟೆ. ಭಾರತೀಯ ದಾರ್ಷನಿಕರಾದ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೂರ್ ಇವರುಗಳು ಬ್ರಹ್ಮರ್ಷಿ ನಾರಾಯಣ ಗುರುಗಳ ಪ್ರಭಾವಕ್ಕೆ ಒಳಗಾಗಿ ಪ್ರೇರೆಪಣೆಯನ್ನು ಪಡೆದ ಮಹನೀಯರು, ಇಂತಹ ಮನುಕುಲದ ದಿವ್ಯ ಜ್ಯೋತಿಯೊಂದರ ಸ್ಥಬ್ದ ಚಿತ್ರವೊಂದನ್ನು ಕೇರಳದ ಸರ್ಕಾರವು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕೇರಳ ರಾಜ್ಯದ ಹೆಮ್ಮೆಯ ಪ್ರತೀಕವಾಗಿ ಕಳಿಸಿರುವುದನ್ನು ಕೇಂದ್ರ ಆಯ್ಕೆ ಸಮಿತಿ ತಿರಸ್ಕರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸ್ತ್ರೀ ಸಮಾನತೆ ಪ್ರತಿಪಾದಿಸಿ ಜಾತಿ, ಮತ ಭೇದಗಳನ್ನು ಧಿಕ್ಕರಿಸಿ ಸಮಾಜೋದ್ದಾರಕ್ಕೆ ಶ್ರಮಿಸಿದ ಮಹಾನ್ ಚೇತನಾ ಶ್ರೀ ನಾರಾಯಣ ಗುರುಗಳು, ಆತ್ಮದಲ್ಲಿ ಅರಿವಿನ ಬೆಳಕು ಮೂಡಿಸಿದವರು, ಅಂತವರ ಮೂರ್ತಿ ಇದ್ದ ಸ್ಥಬ್ದ ಚಿತ್ರವನ್ನು ತಿರಸ್ಕಾರ ಮಾಡಿರುವುದು ಕ್ಷಮಾರ್ಹವಲ್ಲದ ತಪ್ಪು ಹಾಗೂ ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳುವಳಿಕೆ ಇಲ್ಲದ ಅಜ್ಞಾನದ ಪರಮಾವಧಿ, ಆಯ್ಕೆ ಸಮಿತಿಯಲ್ಲಿ ಇಂತಹ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ, ಸಮಾನತೆಯ ಸಮಾಜದ ಕನಸು ಕಾಣುವ ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕಿದೆ. ಇದು ಹಿಂದುಳಿದ ಶೋಷಿತ ದಲಿತ ಗುರುಗಳಿಗೆ ಮತ್ತು ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಬ್ರಹ್ಮರ್ಷಿ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದ ಮೆರವಣಿಗೆಯ ಸಮಿತಿಯು ಅಂಗೀಕಾರ ಮಾಡುವುದರ ಮುಖಾಂತರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಅವಕಾಶ ನೀಡಬೇಕು ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳಿಗೆ ಗೌರವವನ್ನು ನೀಡಬೇಕೆಂದು ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರದೀಪ್, ಹಿರೇಇಡಗೋಡು, ಕೆ.ಎಲ್.ಉಮೇಶ್, ಕೆ.ಪಿ.ಲಿಂಗೇಶ್, ಬಿ.ಯೋಗೇಶ್, ವಿಜಯ್ ಕನ್ಯೆಮನೆ, ಎಸ್.ಪಿ.ವಿಜಯ್ ಕುಮಾರ್, ಸುಧಾಕರ್ ಶೆಟ್ಟಿಹಳ್ಳಿ, ಎಸ್.ಎಂ.ಸಂದೀಪ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News