ಬೀದಿ ಮಕ್ಕಳ ಗುರುತಿಸುವಿಕೆಯಲ್ಲಿ ವಿಳಂಬ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ತರಾಟೆ

Update: 2022-01-17 18:18 GMT

ಹೊಸದಿಲ್ಲಿ, ಜ. 17: ಬೀದಿ ಮಕ್ಕಳನ್ನು ಗುರುತಿಸುವಲ್ಲಿ ಹಾಗೂ ಪುನರ್ವಸತಿ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, 3 ವಾರಗಳ ಒಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಪ್ರತಿ ಜಿಲ್ಲೆಯಲ್ಲಿ ರೂಪಿಸಬೇಕಾಗಿದ್ದ ವಿಶೇಷ ಬಾಲಾಪರಾಧಿ ಪೊಲೀಸ್ ಘಟಕ (ಎಸ್ಜೆಪಿಯು)ವನ್ನು ಸೂಕ್ತವಾಗಿ ರೂಪಿಸಿಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
ಬೀದಿ ಮಕ್ಕಳನ್ನು ಗುರುತಿಸಲು ಎಸ್ಜೆಪಿಯು, ಸರಕಾರೇತರ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಭಾಗಿಯಾಗುವಂತೆ ದೇಶಾದ್ಯಂತದ ಜಿಲ್ಲಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಈಗಾಗಲೇ ಗುರುತಿಸಲಾದ ಮಕ್ಕಳ ಪುನರ್ವಸತಿಯನ್ನು ತ್ವರಿತಗೊಳಿಸುವ ಅಗತ್ಯತೆ ಇದೆ. ಬೀದಿ ಬದಿಯಲ್ಲಿ ಬದುಕುತ್ತಿರುವ ಮಕ್ಕಳ ಪುನರ್ವಸತಿಗೆ ರಾಜ್ಯ ಸರಕಾರ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯತೆ ಇದೆ ಎಂದು ಅದು ಹೇಳಿದೆ.

ಬೀದಿ ಬದಿ ವಾಸಿಸುತ್ತಿರುವ ಮಕ್ಕಳ ಪುನರ್ವಸತಿ ಕುರಿತ ತಮ್ಮ ನೀತಿಗಳಿಗೆ ಸಂಬಂಧಿಸಿ ಎಲ್ಲ ರಾಜ್ಯಗಳೊಂದಿಗೆ ಸಭೆ ನಡೆಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ (ಎನ್ಸಿಪಿಸಿಆರ್)ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಬೀದಿ ಬದಿ ಮಕ್ಕಳ ಪುನರ್ವಸತಿಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸದೇ ಇರುವ  ಅಧಿಕಾರಿಗಳನ್ನು ಬಾಲಾಪರಾಧಿ ನ್ಯಾಯ ಕಾಯ್ದೆ ನಿಯಮಗಳ ಅಡಿಯಲ್ಲಿ ಶಿಕ್ಷಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಎನ್ಸಿಪಿಸಿಆರ್ ಆಯೋಜಿಸುವ ಮುಂದಿನ ಸಭೆಯಲ್ಲಿ ಪೋರ್ಟಲ್ನಲ್ಲ ಸಂಪೂರ್ಣ ದತ್ತಾಂಶ ಹಾಕುವ ಪ್ರಕ್ರಿಯೆಗೆ ಕಾಯದೆ ಚರ್ಚೆ ನಡೆಸಬೇಕು ಎಂದು ನಾಯಾಲಯ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News