ಯುಪಿ ಮೇ ಕಾ ಬಾ ? ಎಂದು ಆದಿತ್ಯನಾಥ್ ಸರಕಾರಕ್ಕೆ ಚಾಟಿ ಬೀಸಿದ ಗಾಯಕಿ ನೇಹಾ ಸಿಂಗ್

Update: 2022-01-18 10:55 GMT
Photo: Youtube

ಲಕ್ನೋ: ಭೋಜಪುರಿ ಗಾಯಕಿ ಹಾಗು ಸೋಷಿಯಲ್ ಮೀಡಿಯಾದಲ್ಲಿ ಬಹಳ ಖ್ಯಾತಿ ಪಡೆದಿರುವ ನೇಹಾ ಸಿಂಗ್ ರಾಥೋಡ್ ಅವರು ಈಗ ಮತ್ತೆ ಭಾರೀ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ರಾಜಕೀಯ ವಿದ್ಯಮಾನಗಳ ಕುರಿತು ವ್ಯಂಗ್ಯ ಹಾಗು ವಿಡಂಬನೆಗಳಿಗೆ ಖ್ಯಾತಿ ಪಡೆದಿರುವ ನೇಹಾ ಈ ಬಾರಿ ಮಾತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ತಮ್ಮ ಹೊಸ ಹಾಡಿನಲ್ಲಿ ಹರಿಹಾಯ್ದಿದ್ದಾರೆ. ಅದು ಈಗ ದೇಶಾದ್ಯಂತ ಭಾರೀ ವೈರಲ್ ಆಗುತ್ತಿದ್ದು ಬಿಜೆಪಿಗರ ನಿದ್ದೆಗೆಡಿಸಿದೆ. ಬಿಜೆಪಿ ವಿರೋಧಿಗಳ ಪಾಲಿಗೆ ಅಸ್ತ್ರವಾಗಿದೆ. 

ಆಗಿದ್ದಿಷ್ಟು. ಬಿಜೆಪಿ ಸಂಸದ, ಭೋಜಪುರಿ ನಟ ರವಿ ಕಿಶನ್ ಅವರು ಐದು ನಿಮಿಷಗಳ ಒಂದು ಬಿಜೆಪಿ ಚುನಾವಣಾ ಪ್ರಚಾರ ಹಾಡು ಬಿಡುಗಡೆ ಮಾಡಿದ್ದಾರೆ ( ಲಿಂಕ್ ಕೆಳಗಿದೆ ).

"ಯುಪಿ ಮೇ ಸಬ್ ಬಾ ( ಯುಪಿಯಲ್ಲಿ ಎಲ್ಲವೂ ಇದೆ " ಎಂಬ ಶೀರ್ಷಿಕೆಯ ಈ ಹಾಡಿನಲ್ಲಿ ಮೋದಿ, ಆದಿತ್ಯನಾಥ್ ಹಾಗು ಬಿಜೆಪಿಯನ್ನು ಎರ್ರಾಬಿರ್ರಿ ಹೊಗಳಲಾಗಿದೆ. ಆದಿತ್ಯನಾಥ್ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ  ಕ್ರಾಂತಿಕಾರಿ ಅಭಿವೃದ್ಧಿಯಾಗಿದೆ ಎಂದು ಹೇಳಲಾಗಿದೆ.

ಇದಕ್ಕೆ ಪ್ರತಿಯಾಗಿ ನೇಹಾ ಸಿಂಗ್ "ಯುಪಿ ಮೇ ಕಾ ಬಾ ( ಯುಪಿಯಲ್ಲಿ ಏನಿದೆ ? )" ಎಂಬ ಹಾಡನ್ನು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ ( ಹಾಡಿನ ಲಿಂಕ್ ಕೆಳಗಿದೆ ) . 

ಇದರಲ್ಲಿ ಆದಿತ್ಯನಾಥ್ ಸರಕಾರದ ಆಡಳಿತ ವೈಫಲ್ಯಗಳನ್ನು ಒಂದೊಂದಾಗಿ ಹೇಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಜನರು ಚಿಕಿತ್ಸೆ ಸಿಗದೇ ಸಾವಿಗೀಡಾಗಿದ್ದು, ಹತ್ರಸ್ ನಲ್ಲಿ ದಲಿತ ಯುವತಿಯ  ಸಾಮೂಹಿಕ ಅತ್ಯಾಚಾರ ಹಾಗು ಕೊಲೆ, ಲಖೀಮ್ ಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಜೀಪು ಹರಿಸಿದ್ದು,  ಭ್ರಷ್ಟಾಚಾರ ಇತ್ಯಾದಿ ವಿಷಯಗಳನ್ನು ಗೃಹಿಣಿಯೊಬ್ಬಳು ಹೇಳುವ  ಬಹಳ ಸಹಜ ಶೈಲಿಯಲ್ಲಿ  ಹಾಡಿದ್ದಾರೆ. 

ಈ ಹಾಡು ಈಗ ಆದಿತ್ಯನಾಥ್ ಸರಕಾರದ ಟೀಕಾಕಾರರಿಗೆ ಪ್ರಮುಖ ಅಸ್ತ್ರವಾಗಿಬಿಟ್ಟಿದೆ. ಇದರಿಂದ ಕಂಗೆಟ್ಟಿರುವ ಬಿಜೆಪಿ ಬೆಂಬಲಿಗರು ನೇಹಾ ಸಿಂಗ್ ವಿರುದ್ಧ ಅಪಪ್ರಚಾರ, ಅವಹೇಳನದ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಆದರೆ ಈ ದಾಳಿಗಳಿಂದ ನೇಹಾ ಒಂದಿಷ್ಟೂ ವಿಚಲಿತರಾದಂತೆ ಕಂಡು ಬರುತ್ತಿಲ್ಲ. 

2020 ರಲ್ಲಿ ಪ್ರಧಾನಿ ಮೋದಿ ಹಠಾತ್ತನೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದಾಗ ಬಿಹಾರ್ ಮೇ ಕಾಬಾ ಹಾಡಿನ ಮೂಲಕ ದೇಶದ ಗಮನ ಸೆಳೆದವರು ನೇಹಾ ಸಿಂಗ್. ಭೋಜಪುರಿ ಹಾಡುಗಳಲ್ಲಿ ಅಶ್ಲೀಲತೆ ನಿರ್ಮೂಲನೆ ಮಾಡುವುದೇ ನನ್ನ ಗುರಿ ಎಂದಿರುವ ನೇಹಾ ಸಾಮಾಜಿಕ, ರಾಜಕೀಯ ವ್ಯಂಗ್ಯ, ಸಂದೇಶಗಳ ಮೂಲಕ ಮನೆಮಾತಾಗುತ್ತಿದ್ದಾರೆ.

Full View Full View
Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News