ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು: ಡಿ.ಕೆ. ಶಿವಕುಮಾರ್

Update: 2022-01-18 12:46 GMT
 ಡಿ.ಕೆ. ಶಿವಕುಮಾರ್ (File Photo)

ಬೆಂಗಳೂರು, ಜ.18: ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ನಮ್ಮ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಅದನ್ನು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಖ್ಯಮಂತ್ರಿಗಳ ಮನೆಗೂ ಹೋಗುತ್ತೇವೆ. ಆದರೆ ಕಾಫಿ-ಟೀ ಕುಡಿದು ನೆಂಟಸ್ಥಿಕೆ ಮಾಡಲು ಹೋಗುವುದಿಲ್ಲ ಎಂದರು.

ನಾವು ಏನು ಮಾಡುತ್ತೇವೆ ಎಂದು ಹೇಳುವುದಿಲ್ಲ. ಆದರೆ ನಾವು ಸುಮ್ಮನೆ ಕೂರುವುದಿಲ್ಲ. ನಾನು ಸಿದ್ದರಾಮಯ್ಯ ಅವರಿಗಾಗಿ ಕಾಯುತ್ತಿದ್ದು, ಅವರು ಮೈಸೂರಿಗೆ ಹೋಗಿದ್ದಾರೆ. ಅವರು ಬಂದ ನಂತರ ಏನು ಮಾಡುತ್ತೇವೆ ಎಂದು ಕಾದು ನೋಡಿ ಎಂದು ಶಿವಕುಮಾರ್ ಹೇಳಿದರು.

ಮೇಕೆದಾಟು ಯೋಜನೆಯಿಂದ ರೈತರಿಗೆ ನೀರು ನೀಡುತ್ತೇವೆ ಎಂಬ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ ಎಂಬ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆರ್.ಅಶೋಕ್‌ರವರಷ್ಟು ಅತಿ ಬುದ್ಧಿವಂತ ಅಲ್ಲ. ಅವರು ಸರಕಾರದ ಪ್ರತಿನಿಧಿ. ನನಗೂ ರಾಜಕೀಯ, ಕಾನೂನು ಗೊತ್ತಿದೆ. ಮೇಕೆದಾಟು ಯೋಜನೆ ಕುಡಿಯುವ ನೀರಿನ ಯೋಜನೆ. ಕೋವಿಡ್‌ನಿಂದ ವಿಶ್ರಾಂತಿ ಪಡೆಯುತ್ತಿದ್ದ ಅವರು ಇನ್ನಷ್ಟು ದಿನ ವಿಶ್ರಾಂತಿ ಪಡೆಯಲಿ ಎಂದರು.

ಕನಕಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಒಂದು ಎಕರೆ ಜಮೀನಿಗೂ ಈ ನೀರು ಬಳಕೆಯಾಗುವುದಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟಿನಲ್ಲಿ ನೀರು ತುಂಬಿದಾಗ, ತಮಿಳುನಾಡಿಗೆ ಅವರ ಪಾಲಿನ ನೀರು ಕೊಟ್ಟ ನಂತರ ಹಾಸನ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ರೈತರಿಗೆ ಅನುಕೂಲ ಆಗುತ್ತದೆ. ರೈತರಿಗೆ ಅನೂಕೂಲವಾಗದೆ ಬ್ಯಾಲೆನ್ಸಿಂಗ್ ರಿಸರ್ವಾಯರ್ ಯೋಜನೆ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಮೇಕೆದಾಟು ವಿಚಾರದಲ್ಲಿ ಬಿಜೆಪಿಯ ಒಕ್ಕಲಿಗ ನಾಯಕರು ನಿಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಎಲ್ಲ ಒಕ್ಕಲಿಗ ನಾಯಕರ ಕೈಲಿ ನಮ್ಮ ವಿರುದ್ಧ ವಾಗ್ದಾಳಿ ನಡೆಸುವುದು ಬಿಜೆಪಿಯವರ ತಂತ್ರಗಾರಿಕೆ. ಅವರು ಬೇರೆ ನಾಯಕರಿಂದ ಮಾತನಾಡಿಸುವುದಿಲ್ಲ. ಮುಖ್ಯಮಂತ್ರಿ ಬೇಕಂತಲೇ ಮಾತಾಡುತ್ತಿಲ್ಲ. ಅವರ ತಂತ್ರಗಾರಿಕೆ ಅವರು ಮಾಡಲಿ ಎಂದು ಉತ್ತರಿಸಿದರು.

ಕ್ಷೇತ್ರದ ನರೇಗಾ ಕೆಲಸದ ಕ್ಯಾಲೆಂಡರ್ ಬಿಡುಗಡೆ: ಕನಕಪುರ ತಾಲೂಕಿನಲ್ಲಿ ನರೇಗಾ ಯೋಜನೆ ಅಡಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಒಳಗೊಂಡ ಕ್ಯಾಲೆಂಡರ್ ಅನ್ನು ಇದೇ ವೇಳೆ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದರು.

‘ಇದರಲ್ಲಿ ನಮ್ಮ ತಾಲೂಕಿನಲ್ಲಿ ಆಗಿರುವ ಕೆಲಸಗಳ ಮಾಹಿತಿ ಇದೆ. ಒಂದು ವರ್ಷದಲ್ಲಿ 46 ಸಾವಿರ ಕುಟುಂಬಗಳಿಗೆ ವೈಯಕ್ತಿಕವಾಗಿ ಕೆಲಸ ಮಾಡಿಕೊಟ್ಟಿದ್ದೇವೆ. ನಮಗೆ 10 ಲಕ್ಷ ಕೆಲಸ ದಿನಗಳ ಗುರಿ ಇತ್ತು. ಆದರೂ ನಾವು 30 ಲಕ್ಷ ದಿನಗಳಷ್ಟು ಕೆಲಸ ನೀಡಿದ್ದೇವೆ. ಇದುವರೆಗೂ 110 ಕೋಟಿ ಖರ್ಚಾಗಿದ್ದು, ಎಪ್ರಿಲ್‌ವರೆಗೂ ನಮಗೆ ಸಮಯವಿದೆ ಎಂದು ಅವರು ಹೇಳಿದರು.

ಆಟದ ಮೈದಾನ, ಉದ್ಯಾನವನ, 66 ಸ್ಮಶಾನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಗಿವೆ. ಈ ಅದ್ಭುತ ಕೆಲಸ ಮಾಡಿರುವ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆ ಸಂವಿಧಾನದಿಂದ ಸಿಕ್ಕ ಹಕ್ಕು, ವೈಯಕ್ತಿಕವಾಗಿ ನೆರವು ನೀಡುವ ಅವಕಾಶ. ಕನಕಪುರದಲ್ಲಿ ಈ ಯೋಜನೆ ಪರಿಣಾಮಕಾರಿ ಜಾರಿಗೆ ಕೇಂದ್ರ ಸರಕಾರ ಪ್ರಶಸ್ತಿ ನೀಡಿದೆ. ರಾಜ್ಯದ ಇತರೆ ಪಂಚಾಯ್ತಿ ಸದಸ್ಯರು ಈ ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News