ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

Update: 2022-01-18 14:19 GMT

ಬೆಂಗಳೂರು: ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಬಿಜೆಪಿ ನಾಯಕರು ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಪತ್ರದೊಂದಿಗೆ ಕಾಂಗ್ರೆಸ್ ನಿಯೋಗವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ಭೇಟಿಯಾಗಿ ಮನವಿ ನೀಡಿತು.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಡಾ.ಬಿ.ಎಲ್ ಶಂಕರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮುಖಂಡ ವಿಜಯ್ ಮುಳಗುಂದ ಸೇರಿದಂತೆ ಇನ್ನಿತರರು ಇದ್ದ ನಿಯೋಗವು ಮನವಿ ಸಲ್ಲಿಸಿತು.

ಡಿಕೆಶಿ ಪತ್ರ: ಕೆಪಿಸಿಸಿ ವತಿಯಿಂದ ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಪೂರ್ವ ನಿಗದಿತ ಕುಡಿಯುವ ನೀರಿನ ಯೋಜನೆಗಾಗಿ ಮೇಕೆದಾಟು ಪಾದಯಾತ್ರೆಯನ್ನು ಜ.9ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಿಂದ ಆರಂಭಿಸಲಾಯಿತು. ಈ ಪಾದಯಾತ್ರೆಯಲ್ಲಿ ಭಾಗವಹಿಸಿದ ಜನರು ಕೋವಿಡ್ ನಿಯಮಗಳನ್ನು ಪಾಲಿಸಿದ್ದರೂ ಕೆಪಿಸಿಸಿ ಅಧ್ಯಕ್ಷನಾದ ನನ್ನ ಮೇಲೂ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇನ್ನಿತರ ನಾಯಕರ ಮೇಲೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಹಲವಾರು ಎಫ್‌ಐಆರ್‌ಗಳನ್ನು ದಾಖಲು ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಕೋವಿಡ್ ಹರಡಲು ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಕಾರಣ ಎಂದು ಬಿಜೆಪಿ ಬಿಂಬಿಸುತ್ತಿದೆ. ಆದರೂ ನೆಲದ ಕಾನೂನಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ತಲೆಬಾಗಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರದ ಅನೇಕ ಬಿಜೆಪಿ ಮುಖಂಡರು, ಶಾಸಕರು ಹಾಗೂ ಕಾರ್ಯಕರ್ತರು ಸರಕಾರ ರೂಪಿಸಿರುವ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಮನಸೋಇಚ್ಛೆ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಯಾವುದೆ ಅನುಮತಿ ಪಡೆದುಕೊಳ್ಳದೆ ಅವ್ಯಾಹತವಾಗಿ ಮಾಡುತ್ತಾ ಸಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜ.6ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹೊಸದಾಗಿ ಚುನಾಯಿತರಾದ ವಿಧಾನಪರಿಷತ್ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ, ವಿಧಾನಪರಿಷತ್ ಸಭಾಪತಿ, ಸ್ಪೀಕರ್, ಸಚಿವರು, ಶಾಸಕರು ಹಾಗೂ ಇತರರು ಸಹಸ್ರಾರು ಸಂಖ್ಯೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಜ.8ರಂದು ವೀಕೆಂಡ್ ಕರ್ಫ್ಯೂ ದಿನದಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ‘ಎಳ್ಳು ಅಮಾವಾಸ್ಯೆ’ ಜಾತ್ರೆಯ ಉದ್ಘಾಟನೆ ನೆರವೇರಿಸಿದ್ದರು. ಇದರಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ 25 ಸಾವಿರಕ್ಕೂ ಹೆಚ್ಚು ಜನ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಪಾಲ್ಗೊಂಡಿದ್ದರು ಎಂದು ಶಿವಕುಮಾರ್ ಹೇಳಿದ್ದಾರೆ.

ಜ.10ರಂದು ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಬಿಜೆಪಿ ಶಾಸಕ ಸುಭಾಶ್ ಗುತ್ತೇದಾರ್ ಅನುಮತಿ ಪಡೆಯದೆ 25 ಸಾವಿರಕ್ಕೂ ಹೆಚ್ಚು ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಸೇರಿಸಿ ಪ್ರತಿಭಟನೆ ಆಯೋಜಿಸಿದ್ದರು. ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಕ್ಷೇತ್ರದ ಬಲಮುರಿ ಗ್ರಾಮದಲ್ಲಿ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರನ್ನು ಸೇರಿಸಿ ‘ಹೋರಿ ಬೆದರಿಸುವ’ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಶಿವಕುಮಾರ್ ಹೇಳಿದ್ದಾರೆ.

ಜ.11ರಂದು ಸಚಿವ ಬಿ.ಶ್ರೀರಾಮುಲು ಸಹಯೋಗದೊಂದಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ನಗರದ ತಮ್ಮ ನಿವಾಸದ ಬಳಿ ಅನುಮತಿ ಇಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಸೇರಿಸಿ ಜನ್ಮದಿನ ಆಚರಿಸಿಕೊಂಡಿದ್ದರು. ಬಳ್ಳಾರಿ ನಗರದ ಕೆಲವು ಬಿಜೆಪಿ ಕಾರ್ಪೋರೇಟರ್‌ಗಳು ಹಾಗೂ ಮುಖಂಡರು ತಮ್ಮ ವಾರ್ಡ್ಗಳಲ್ಲಿ ಜನಾರ್ದನ ರೆಡ್ಡಿ ಹುಟ್ಟುಹಬ್ಬ ಕಾರ್ಯಕ್ರಮವನ್ನು ಸಹಸ್ರಾರು ಕಾರ್ಯಕರ್ತರನ್ನು ಸೇರಿಸಿ ಆಚರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜ.14ರಂದು ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಸಹಸ್ರಾರು ಕಾರ್ಯಕರ್ತರನ್ನು ಸೇರಿಸಿ ‘ಎಮ್ಮೆ ಓಟ ಸ್ಪರ್ಧೆ’ಯನ್ನು ಅನುಮತಿ ಇಲ್ಲದೆ ಆಯೋಜಿಸಿದ್ದರು. ಜ.16ರಂದು ವೀಕೆಂಡ್ ಕರ್ಫ್ಯೂ ಇದ್ದರೂ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಹಾಲು ಅಭಿಷೇಕ ಕಾರ್ಯಕ್ರಮ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಆಯೋಜಿಸಿದ್ದರು ಎಂದು ಶಿವಕುಮಾರ್ ಹೇಳಿದ್ದಾರೆ.

ಜ.16ರಂದು ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್.ವಿ.ರಾಮಚಂದ್ರ ಅನುಮತಿ ಪಡೆದುಕೊಳ್ಳದೆ ಸಹಸ್ರಾರು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜ.16ರಂದು ಪದ್ಮನಾಭನಗರದಲ್ಲಿ ನಗರ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್, ಯಾವುದೆ ಅನುಮತಿ ಪಡೆಯದೆ ತಮ್ಮ ನಿವಾಸದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಸೇರಿಸಿ ಬೆಳಗ್ಗೆಯಿಂದ ಸಂಜೆವರೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂದು ಶಿವಕುಮಾರ್ ದೂರಿದ್ದಾರೆ.

ಜ.16ರಂದು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ‘ಬಿಜೆಪಿ ಫಾರ್ ಬೆಟರ್ ಬೆಂಗಳೂರು’ ಎಂಬ ಶೀರ್ಷಿಕೆಯಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳೀಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಶಾಸಕರು, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಜ.17ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಪ್ರಧಾನಿ ಮೋದಿ ಅವರ ಆರೋಗ್ಯ ಮತ್ತು ಆಯಸ್ಸು ವೃದ್ಧಿಗಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಕೆ.ಸಿ.ನಾಗೇಂದ್ರ ಭಾರದ್ವಾಜ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಅರ್ಚಕರು ಮೃತ್ಯುಂಜಯ ಹೋಮ ಮಾಡಿಸಿದ್ದಾರೆ. ಹರೀಶ್ ಪೂಂಜ ಈ ಹೋಮಕ್ಕಾಗಿ ಯಾವುದೆ ಅನುಮತಿ ಪಡೆಯದೆ ಸಹಸ್ರಾರು ಸಂಖ್ಯೆಯ ಭಕ್ತರನ್ನು ಸೇರಿಸಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಕಾರ್ಯಕ್ರಮ, ಸಮಾರಂಭಗಳಲ್ಲಿ ಭಾಗವಹಿಸಿದ್ದ ಬಹುತೇಕರು ಮಾಸ್ಕ್ ಧರಿಸಿರುವುದಿಲ್ಲ, ಸ್ಯಾನಿಟೈಸರ್ ಬಳಸಿರುವುದಿಲ್ಲ, ಸುರಕ್ಷಿತ ಅಂತರ ಕಾಪಾಡಿಕೊಳ್ಳದೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದನ್ನು ರಾಜ್ಯದ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಅನೇಕ ಕಾನೂನುಬಾಹಿರ ಕೋವಿಡ್ ನಿಯಮಾವಳಿಗಳ ಉಲ್ಲಂಘನಾ ಕಾರ್ಯಕ್ರಮಗಳು ರಾಜ್ಯದ ಉದ್ದಗಲಕ್ಕೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಆಚರಿಸುತ್ತಿದ್ದರೂ ಸಂಬಂಧಪಟ್ಟ ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾವುದೆ ಕ್ರಮ ಜರುಗಿಸದೆ ಮೌನವಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯ ಸರಕಾರಕ್ಕೆ ರಾಜ್ಯದ ಜನತೆಯ ಆರೋಗ್ಯದ ಬಗ್ಗೆ ಕಿಂಚಿತ್ತಾದರೂ ಬದ್ಧತೆ ಇರುವುದಾದರೆ ಕೂಡಲೆ ಕೋವಿಡ್ ಹರಡದಂತೆ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳ ಪಾಲನೆಗೆ ಕ್ರಮ ಜರುಗಿಸಬೇಕು. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಮುಖಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸದೆ ನಿರ್ಲಕ್ಷ್ಯ ತೋರಿರುವ ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿ ಮೇಲೆ ಕೂಡಲೆ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು. ಹಾಗೂ ನಿಯಮಾವಳಿಗಳನ್ನು ಗಾಳಿಗೆ ತೂರಿ ಕೋವಿಡ್ ಹರಡಲು ಕಾರಣಕರ್ತರಾದ ಬಿಜೆಪಿ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News