ರಾಜ್ಯದ ಶಾಲೆ ಕಾಲೇಜುಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆಗೆ ನಿರ್ಧಾರ: ಸಿಎಂ ಬೊಮ್ಮಾಯಿ

Update: 2022-01-18 17:15 GMT

ಬೆಂಗಳೂರು: ಅಪ್ರತಿಮ ದೇಶ ಭಕ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಸಾಧನೆ ಸ್ಮರಣೀಯ ಹಾಗೂ ಯುವ ಜನರಿಗೆ ಪ್ರೇರಣೆ. ಹೀಗಾಗಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮಂಗಳವಾರ ಬೆಂಗಳೂರಿನಲ್ಲಿ ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ( ಜನವರಿ 23) ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್  ಮೂಲಕ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. 

ಬೆಂಗಳೂರಿನ ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಯ ಆವರಣದಲ್ಲಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯನ್ನು ಮಾಡಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೂರು ಜನ ಎನ್ ಸಿ ಸಿ ಕೆಡೆಟ್ ಮತ್ತು ಕಮಾಂಡರ್ ಗಳು ಭಾಗಿಯಾಗಲಿದ್ದಾರೆ. ಇದು ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನ. ಹೀಗಾಗಿ ರಾಜ್ಯದ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ವರ್ಷವಿಡಿ ಸುಭಾಷ್ ಚಂದ್ರ ಬೋಸ್ ಅವರ ಕುರಿತಾದ ಕಾರ್ಯಕ್ರಮಗಳನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ವಿಶೇಷವಾದ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸಿಎಂ  ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ,  ಕರ್ನಾಟಕ ಗೋವಾ ಎನ್ ಸಿಸಿ ನಿರ್ದೇಶನಾಲಯದ ಮುಖ್ಯಸ್ಥ ಏರ್ ಕಮಾಂಡರ್ ಬಿ ಎಸ್ ಕನ್ವರ್ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News