ದೇವಾಸ್ ಕುರಿತ ಸುಪ್ರೀಂಕೋರ್ಟ್ ತೀರ್ಪಿನಿಂದ ಕಾಂಗ್ರೆಸ್ ಭ್ರಷ್ಟಾಚಾರದ ಅನಾವರಣ: ಎಂ.ಜಿ.ಮಹೇಶ್

Update: 2022-01-18 17:32 GMT

ಬೆಂಗಳೂರು, ಜ.18: ಬೆಂಗಳೂರಿನ ದೇವಾಸ್ ಮಲ್ಟಿಮೀಡಿಯಾ ಸಂಸ್ಥೆಯನ್ನು ಮುಚ್ಚಬೇಕೆಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‍ನ ತೀರ್ಪು ಅತ್ಯಂತ ಮಹತ್ವದ್ದು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ (ಎನ್‍ಎಲ್‍ಟಿ) 2021ರ ಮೇ ತಿಂಗಳಿನಲ್ಲಿ ದೇವಾಸ್ ಕಂಪೆನಿಯನ್ನು ಮುಚ್ಚಲು ಸೂಚಿಸಿತ್ತು. ಇದರ ವಿರುದ್ಧ ದೇವಾಸ್ ಮಲ್ಟಿಮೀಡಿಯಾವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಎನ್‍ಎಲ್‍ಟಿ ಆದೇಶವನ್ನು ಎತ್ತಿ ಹಿಡಿದಿದೆ ಮತ್ತು ದೇವಾಸ್ ಸಂಸ್ಥೆಯನ್ನು ಮುಚ್ಚಲು ಸಹಮತ ಸೂಚಿಸಿದೆ ಎಂದು ಮಹೇಶ್ ತಿಳಿಸಿದ್ದಾರೆ.

ದೇವಾಸ್ ಮತ್ತು ಇಸ್ರೋದ ಅಂಗಸಂಸ್ಥೆಯಾದ ಅಂತರಿಕ್ಷ್ ನಡುವಿನ ಒಪ್ಪಂದದ ವೇಳೆ ವಂಚನೆ ನಡೆದಿದೆ. ಸ್ಪೆಕ್ಟ್ರಂ ಒಪ್ಪಂದದ ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮಹಾ ಲೆಕ್ಕ ಪರಿಶೋಧಕ ಸಂಸ್ಥೆ (ಸಿಎಜಿ) ತಿಳಿಸಿತ್ತು. ಈ ತೀರ್ಪಿನ ಮೂಲಕ ಕಾಂಗ್ರೆಸ್ ಅವಧಿಯ ಮತ್ತೊಂದು ದೊಡ್ಡ ಭ್ರಷ್ಟಾಚಾರ ಹಗರಣದ ನಗ್ನ ದರ್ಶನವಾಗಿದೆ. ಕ್ರೋನಿ ಬಂಡವಾಳಗಾರರಿಗೆ ಲಾಭ ಆಗುವ ಪಿತೂರಿ ಇದರ ಹಿಂದಿರುವುದೂ ಬಹಿರಂಗಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಾದವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸರಕಾರವು ಮಧ್ಯವರ್ತಿಗಳ ಜೊತೆಗೂಡಿ ಮೋಸ ಮಾಡಲು ಮುಂದಾದುದನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಭ್ರಷ್ಟಾಚಾರದ ವಿರುದ್ಧ ಮಾತನ್ನೇ ಬಂಡವಾಳ ಮಾಡಿಕೊಂಡ ಯುಪಿಎ ಮತ್ತು ಅದರ ಅಂಗಪಕ್ಷವೆನಿಸಿದ ಕಾಂಗ್ರೆಸ್‍ನ ನಿಜ ಬಣ್ಣ ಈ ಮೂಲಕ ಬಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಹಾಗೂ ತಪ್ಪಿತಸ್ಥರ ವಿರುದ್ಧ ತೀವ್ರ ಕ್ರಮಕ್ಕೆ ಒತ್ತಾಯಿಸುತ್ತದೆ ಎಂದು ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News