ಮಾಸ್ಕ್ ಧರಿಸಬೇಡಿ ಎಂದು ಹೇಳಿಲ್ಲ: ಉಮೇಶ್ ಕತ್ತಿ ಸ್ಪಷ್ಟನೆ

Update: 2022-01-18 17:48 GMT

ಬೆಂಗಳೂರು, ಜ.18: ಕೋವಿಡ್ ಹಿನ್ನೆಲೆ ಮಾಸ್ಕ್ ಧರಿಸಬೇಡಿ ಎಂದು ಎಲ್ಲಿಯೂ ಹೇಳಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‍ ಕತ್ತಿ ಹೇಳಿದರು.

ಮಂಗಳವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾಸ್ಕ್ ಧರಿಸುವ ಕುರಿತು ನಾನು ಯಾರಿಗೂ ಏನು ಹೇಳಿಲ್ಲ, ನಾವೆಲ್ಲರೂ ಸರಕಾರ ರೂಪಿಸಿರುವ ಮಾರ್ಗಸೂಚಿ ಪಾಲನೆ ಮಾಡೋಣ ಎಂದರು.

ಮಾಸ್ಕ್ ಹಾಕುವ ವಿಚಾರದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಪಾಲಿಸಬೇಕು ಎನ್ನುವುದು ನನ್ನ ಹೇಳಿಕೆಯಾಗಿತ್ತು. ಮಾಸ್ಕ್ ಹಾಕಬೇಡಿ ಎಂದು ಯಾರಿಗೂ ಹೇಳಿಲ್ಲ. ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದ್ದಾರೆ.

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಮಾಧ್ಯಮದಲ್ಲಿ ವರದಿ ಮಾಡಲಾಗಿದೆ. ನಾವೆಲ್ಲರೂ ಸರಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲಿಸೋಣ ಎಂದು ಅವರು ಮನವಿ ಮಾಡಿದ್ದಾರೆ.

ಇತ್ತೀಚಿಗೆ ಅಥಣಿಯಲ್ಲಿ ಮಾತನಾಡಿದ್ದ ಸಚಿವರು, ಕೇಂದ್ರ ಸರಕಾರದಿಂದ ಕೋವಿಡ್ ನಿಯಮಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಲಾಗಿದೆ. ಕಳೆದ ಎರಡು ದಿನದ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಸ್ಕ್ ಧರಿಸುವುದು, ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಅದಕ್ಕೆ ನಾನು ಮಾಸ್ಕ್ ಧರಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News