ಹಸಿವಿನ ವಿರುದ್ಧ ಹೋರಾಡಲು ಮಾದರಿ ಯೋಜನೆ ರೂಪಿಸಿ : ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶ

Update: 2022-01-18 18:01 GMT

ಹೊಸದಿಲ್ಲಿ, ಜ. 18: ದೇಶದಲ್ಲಿ ಹಸಿವಿನಿಂದ ಸಾರ್ವನ್ನಪ್ಪಿದವರ ಇತ್ತೀಚೆಗಿನ ದತ್ತಾಂಶವನ್ನು ನೀಡುವಂತೆ ಹಾಗೂ ಹಸಿವಿನ ವಿರುದ್ಧ ಹೋರಾಡಲು ರಾಷ್ಟ್ರೀಯ ಮಾದರಿ ಯೋಜನೆಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಮಂಗಳವಾರ ಪ್ರಕರಣದ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠ, ‘‘ದೇಶದಲ್ಲಿ ಒಬ್ಬರನ್ನು ಹೊರತುಪಡಿಸಿದರೆ, ಬೇರೆ ಯಾರೂ ಹಸಿವಿನಿಂದ ಸಾವನ್ನಪ್ಪಿಲ್ಲ ಎಂದು ನೀವು ಹೇಳುತ್ತಿದ್ದೀರಾ ? ನೀವು ನಿಮ್ಮ ಹೇಳಿಕೆಗೆ ಬದ್ಧರಾಗಿರಲು ಸಾಧ್ಯವೇ?’’ ಎಂದು ಪ್ರಶ್ನಿಸಿತು. ಹಸಿವಿನಿಂದ ಸಾವನ್ನಪ್ಪಿರುವ ಬಗ್ಗೆ ರಾಜ್ಯ ಸರಕಾರಗಳು ಯಾವುದೇ ವರದಿ ಮಾಡದೇ ಇರುವುದರಿಂದ, ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕೇ ? ಕೇಂದ್ರ ಸರಕಾರ ಹಸಿವಿನಿಂದ ಸಾವನ್ನಪ್ಪಿದವರ ಕುರಿತ ಇತ್ತೀಚೆಗಿನ ದತ್ತಾಂಶವನ್ನು ನೀಡಬೇಕು. ಮಾಹಿತಿ ನೀಡುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಲ್ಲಿ ಪೀಠ ಹೇಳಿತು.

ಮುಂದಿನ ತಿಂಗಳು ಪಂಚ ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಕಲ್ಯಾಣ ಯೋಜನೆಗಳನ್ನು ಘೋಷಿಸಿವೆ. ಸಮುದಾಯ ಅಡುಗೆ ಮನೆಯ ನೀತಿ ಕೇಂದ್ರವನ್ನು ಜನಪ್ರಿಯಗೊಳಿಸಲಿದೆ ಎಂದು ಪೀಠ ಹೇಳಿದೆ. ಇದು ಚುನಾವಣಾ ಸಮಯ. ನೀವು ನೀತಿ ರೂಪಿಸಿದರೆ ಹಾಗೂ ಹೆಚ್ಚುವರಿ ಆಹಾರ ಧಾನ್ಯಗಳನ್ನು ನೀಡಿದರೆ, ಅನಂತರ ರಾಜ್ಯಗಳು ಬೇಯಿಸಿದ ಆಹಾರ ನೀತಿಯನ್ನು ತರಲು ಬಯಸಲಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತು. 134 ಯೋಜನೆಗಳು ಜಾರಿಯಲ್ಲಿವೆ ಹಾಗೂ ಈಗಾಗಲೇ ಅವರಿಗೆ ಆಹಾರ ಧಾನ್ಯಗಳನ್ನು ವಿತರಿಸಿರುವುದಂದ ರಾಜ್ಯಗಳಿಗೆ ಹೆಚ್ಚು ಹಣಕಾಸು ನೆರವು ನೀಡಲು ಸಾಧ್ಯವಿಲ್ಲ ಎಂದು ಕೆ.ಕೆ. ವೇಣುಗೋಪಾಲ್ ಅವರು ನ್ಯಾಯಾಲಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹೆಚ್ಚುವರಿ ಆಹಾರ ಧಾನ್ಯಗಳನ್ನು ಪೂರೈಸುತ್ತಿರುವ ಬಗ್ಗೆ ಕೇಂದ್ರ ಸರಕಾರ ಪರಿಶೀಲನೆ ನಡೆಸಬೇಕು ಎಂದು ಹೇಳಿತು. ರಾಜ್ಯಗಳು ಹಾಗೂ ಇತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಸಮುದಾಯ ಪಾಕ ಶಾಲೆಗೆ ರಾಷ್ಟ್ರೀಯ ಮಾದರಿ ಯೋಜನೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿತು. ‘‘ಜನರು ಹಸಿವಿನಿಂದ ನರಳಬಾರದು, ಹಸಿವಿನಿಂದ ಸಾವನ್ನಪ್ಪಬಾರದು ಎಂಬುದು ನಮ್ಮ ಉದ್ದೇಶ. ನೀವು ನಿಮ್ಮ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನೋಡೆಲ್ ಯೋಜನೆಯೊಂದಿಗೆ ಬನ್ನಿ. ನಾವು ಈ ನ್ಯಾಯಾಲಯದ ಉದ್ದೇಶ ಹಾಗೂ ಪರಿಹಾರ ಕಂಡುಕೊಳ್ಳುವ ಅಗತ್ಯತೆಯನ್ನು ವಿವರಿಸಿದ್ದೇವೆ’’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ವೇಣುಗೋಪಾಲ್ಗೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News