ನರಗುಂದ ಶಮೀರ್ ಹತ್ಯೆ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಪರಿಹಾರ, ಸೂಕ್ತ ತನಿಖೆ ನಡೆಸಿ; ಸಿಎಂ ಇಬ್ರಾಹಿಂ

Update: 2022-01-19 19:28 GMT

ಬೆಂಗಳೂರು, ಜ.19: ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಹತ್ಯೆಯಾಗಿರುವ ನರಗುಂದ ನಿವಾಸಿ ಶಮೀರ್ ಶಹಪೂರ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ಪರಿಹಾರ ನೀಡುವ ಜೊತೆಗೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಎಂ.ಇಬ್ರಾಹಿಂ ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿಯೇ ದುಷ್ಕರ್ಮಿಗಳು ಗುರಿಯಾಗಿಸಿಕೊಂಡು ಗುಂಪು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 19 ವರ್ಷದ ಶಮೀರ್ ಶಹಪೂರ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಂಶೀರ್ ಪಠಾಣ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಕೋಮು ದ್ವೇಷದ ಕಾರಣದಿಂದಲೇ ಈ ದಾಳಿ ನಡೆಸಿ ಪ್ರಾಣ ಹಾನಿ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಸಂಬಂಧ ಗೃಹ ಇಲಾಖೆ ರೀತಿಯಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಬೇಕು. ಈ ಸಂಬಂಧ ಈಗಾಗಲೇ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡಿ, ಕ್ರಮಕ್ಕೆ ಆಗ್ರಹಿಸಿದ್ದೇನೆ ಎಂದು ಅವರು ತಿಳಿಸಿದರು.

ಬಡ ಕುಟುಂಬಕ್ಕೆ ಶಮೀರ್ ಶಹಪೂರ್ ಆಸರೆಯಾಗಿದ್ದ. ಆದರೆ, ಇದೀಗ ಆತನ ಕೊಲೆಯಾಗಿದ್ದು, ಇಂತಹ ಘಟನೆಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಅವರ ಕುಟುಂಬಕ್ಕೆ ರಕ್ಷಣೆ ಮತ್ತು ಗಾಯಗೊಂಡಿರುವ ಯುವಕನಿಗೂ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.

ಕೋವಿಡ್ ಸಂಬಂಧ ಜಾರಿಗೊಳಿಸಿರುವ ವಾರಾಂತ್ಯ ಕಫ್ರ್ಯೂ, ಲಾಕ್‍ಡೌನ್‍ನಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ಬಡವರು, ಮಧ್ಯಮವರ್ಗ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಒಂದು ರಾಜ್ಯ ಸರಕಾರ ಕಠಿಣ ನಿಯಮ ಜಾರಿಗೊಳಿಸುವ ಮುನ್ನ ಪರಿಹಾರ ಘೋಷಣೆ ಮಾಡಲಿ ಎಂದು ಇಬ್ರಾಹಿಂ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News