ದೇಶದಲ್ಲಿ ಒಂದೇ ದಿನ 3 ಲಕ್ಷ ದಾಟಿದ ಕೋವಿಡ್ ಪ್ರಕರಣ, 350 ಸೋಂಕಿತರ ಮೃತ್ಯು

Update: 2022-01-20 01:45 GMT

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆಯಲ್ಲಿ ಬುಧವಾರ ದೇಶಾದ್ಯಂತ ಹೊಸ ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಗಡಿ ದಾಟಿದೆ. ಮೂರು ದಿನಗಳ ಕಾಲ ಸತತ ಇಳಿಕೆ ಪ್ರವೃತ್ತಿ ಕಂಡುಬಂದ ಭಾರತದಲ್ಲಿ ಬುಧವಾರ ದಿಢೀರನೇ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಕೆಲ ರಾಜ್ಯಗಳ ಅಂಕಿ ಅಂಶ ಇನ್ನೂ ಬರಬೇಕಿದ್ದು, ಈಗಾಗಲೇ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,04,416ಕ್ಕೇರಿದೆ.

ಇದಕ್ಕೂ ಮುನ್ನ ಭಾರತದಲ್ಲಿ 2021ರ ಮೇ 15ರಂದು 3 ಲಕ್ಷಕ್ಕೂ ಅಧಿಕ (3,11,077) ಪ್ರಕರಣ ವರದಿಯಾಗಿತ್ತು. ಮೂರನೇ ಅಲೆಯಲ್ಲಿ ಡಿಸೆಂಬರ್ 27ರ ಬಳಿಕ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಕೇವಲ 23 ದಿನಗಳ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದೆ. ಕಳೆದ ವರ್ಷದ ಫೆಬ್ರುವರಿ ಮಧ್ಯದಲ್ಲಿ ಆರಂಭವಾದ ಎರಡನೇ ಅಲೆಯ ವೇಳೆ ಈ ಮಟ್ಟ ತಲುಪಲು 60 ದಿನ ತೆಗೆದುಕೊಂಡಿತ್ತು.

ಬುಧವಾರ ರಾತ್ರಿ 11 ಗಂಟೆವರೆಗೆ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 356 ಆಗಿದ್ದು, ಮಂಗಳವಾರದ ಒಟ್ಟು ಸಂಖ್ಯೆಯಾದ 357ನ್ನು ದಾಟುವ ನಿರೀಕ್ಷೆಯಿದೆ. ಪಂಜಾಬ್, ಜಾರ್ಖಂಡ್ ಮತ್ತು ತ್ರಿಪುರಾದಿಂದ ಇನ್ನೂ ಅಂಕಿ ಅಂಶಗಳು ಬರಬೇಕಿವೆ. ಕಳೆದ ಸೆಪ್ಟೆಂಬರ್‌ನಿಂದೀಚೆಗೆ ಮೊನ್ನೆಯವರೆಗೂ ಸಾವಿನ ಸಂಖ್ಯೆ 300ನ್ನು ದಾಟಿರಲಿಲ್ಲ. ಆದರೆ ಸಾವಿನ ದರ ಮಾತ್ರ ಎರಡನೇ ಅಲೆಗಿಂತ ಕಡಿಮೆ ಇದ್ದು, ಎರಡನೇ ಅಲೆಯಲ್ಲಿ 3 ಲಕ್ಷ ಪ್ರಕರಣ ವರದಿಯಾದ ದಿನ 2000ಕ್ಕೂ ಹೆಚ್ಚು ಸಾವು ಸಂಭವಿಸಿತ್ತು.

ಜಾಗತಿಕ ಮಟ್ಟದಲ್ಲಿ ಭಾರತ, ಅಮೆರಿಕ ಹೊರತುಪಡಿಸಿದರೆ ಅತ್ಯಂತ ಬಾಧಿತವಾದ ಎರಡನೇ ದೇಶ ಎನಿಸಿಕೊಂಡಿದೆ. ಜನವರಿ 17ರಂದು ಅಮೆರಿಕದಲ್ಲಿ 8.7 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಮತ್ತು ಭಾರತವನ್ನು ಹೊರತುಪಡಿಸಿದರೆ 1 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾದ ಏಕೈಕ ದೇಶ ಅರ್ಜೆಂಟೀನಾ. ಫ್ರಾನ್ಸ್ ಮತ್ತು ಇಟಲಿಯಲ್ಲಿ ಕೂಡಾ ಜನವರಿ 17ರಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದರೆ ಮರುದಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

ಭಾರತದ ರಾಜ್ಯಗಳ ಪೈಕಿ ಮಹಾರಾಷ್ಟ್ರ ಪ್ರಕರಣಗಳ ಸಂಖ್ಯೆಯಲ್ಲಿ ಅಗ್ರಸ್ಥಾನಿಯಾಗಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ಉಭಯ ರಾಜ್ಯಗಳಲ್ಲಿ ತಲಾ 40 ಸಾವಿರಕ್ಕೂ ಅಧಿಕ ಪ್ರಕರಣಗಳ ವರದಿಯಾಗಿವೆ. 30 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾದ ಕೇರಳ ಮೂರನೇ ಸ್ಥಾನದಲ್ಲಿದ್ದರೆ, ತಮಿಳುನಾಡು 20 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಿಸಿದೆ. ಆರು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಅಧಿಕ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News