ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಮೇಲೆ ತನ್ನ ಪ್ರಭಾವ ಕುರಿತ ವರದಿಯನ್ನು ಫೇಸ್‌ಬುಕ್ ತಡೆಹಿಡಿದಿದೆ: ಆರೋಪ

Update: 2022-01-20 12:33 GMT

ಹೊಸದಿಲ್ಲಿ,ಜ.20: ಫೇಸ್‌ಬುಕ್ ನ ಹುಳುಕುಗಳನ್ನು ಬಯಲಿಗೆಳೆದಿದ್ದ ವಿಷಲ್ ಬ್ಲೋವರ್ ಗಳೊಂದಿಗೆ 20ಕ್ಕೂ ಅಧಿಕ ಮಾನವ ಹಕ್ಕು ಸಂಘಟನೆಗಳು ಭಾರತದಲ್ಲಿ ಮಾನವ ಹಕ್ಕುಗಳ ಮೇಲೆ ಫೇಸ್ಬುಕ್ ನ ಪ್ರಭಾವವನ್ನು ನಿರ್ಧರಿಸುವ ಬಹುನಿರೀಕ್ಷಿತ ವರದಿಯನ್ನು ಬಿಡುಗಡೆಗೊಳಿಸುವಂತೆ ಬುಧವಾರ ಕಂಪನಿಯನ್ನು ಆಗ್ರಹಿಸಿವೆ  ಎಂದು scroll.in ವರದಿ ಮಾಡಿದೆ.

ಭಾರತದಲ್ಲಿ ದ್ವೇಷಭಾಷಣಗಳ ಹರಡುವಿಕೆ ಮತ್ತು ಹಿಂಸೆಯನ್ನು ಪ್ರಚೋದಿಸುವಲ್ಲಿ ಕಂಪನಿಯ ಪಾತ್ರವನ್ನು ಪರಿಶೀಲಿಸಲು ಫೇಸ್ಬುಕ್ 2020ರಲ್ಲಿ ಮಾನವ ಹಕ್ಕುಗಳ ಮೇಲೆ ಪ್ರಭಾವ ಮೌಲ್ಯಮಾಪನ (ಎಚ್ಆರ್ಐಎ)ವನ್ನು ನಡೆಸಲು ಕಾನೂನು ಸಂಸ್ಥೆ ಫಾಲೀ ಹೋಗ್ ಅನ್ನು ನೇಮಕಗೊಳಿಸಿತ್ತು.

ಆಮ್ನೆಸ್ಟಿ ಇಂಟರ್ನ್ಯಾಷನಲ್, ಹ್ಯೂಮನ್ ರೈಟ್ಸ್ ವಾಚ್ ಸೇರಿದಂತೆ 21 ಸಂಘಟನೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ವಿಮರ್ಶಕ ಗುಂಪು ರಿಯಲ್ ಫೇಸ್ಬುಕ್ ಓವರ್ಸೈಟ್ ಬೋರ್ಡ್ ಜ.3ರಂದು ಫೇಸ್ಬುಕ್ ನ ಮಾನವ ಹಕ್ಕುಗಳ ನಿರ್ದೇಶಕಿ ಮಿರಾಂಡಾ ಸಿಸನ್ಸ್ ಅವರಿಗೆ ಪತ್ರವೊಂದನ್ನು ಬರೆದಿದ್ದವು.
ಈ ಪ್ರಕರಣದಲ್ಲಿ ಫೇಸ್ಬುಕ್ ಮಾನವ ಹಕ್ಕುಗಳನ್ನು ಗೌರವಿಸಲು ಬದ್ಧತೆಯನ್ನು ಹೊಂದಿಲ್ಲ ಎನ್ನುವುದು ಪ್ರಸ್ತುತ ಗ್ರಹಿಕೆಯಾಗಿದೆ. ಭಾರತೀಯ ಎಚ್ಆರ್ಐಎ ಫೇಸ್ಬುಕ್ ನ ಮಾನವ ಹಕ್ಕುಗಳ ಕುರಿತು ಶ್ರದ್ಧೆಯ ಪ್ರಮುಖ ಅಂಶವಾಗಿದೆ ಮತ್ತು ಮಾನವ ಹಕ್ಕುಗಳನ್ನು ಗೌರವಿಸುವ ಕಂಪನಿಯ ಹೊಣೆಗಾರಿಕೆಗೆ ಅನುಗುಣವಾಗಿ ಅದನ್ನು ಬಹಿರಂಗಗೊಳಿಸಬೇಕು ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಬುಧವಾರ ವಿವಿಧ ಸಂಘಟನೆಗಳು, ವಿಷಲ್ ಬ್ಲೋವರ್ ಗಳಾದ ಫ್ರಾನ್ಸೆಸ್ ಹಾಗೆನ್ ಮತ್ತು ಸೋಫಿ ಝಾಂಗ್ ಹಾಗೂ ಫೇಸ್ಬುಕ್ ನ ಮಾಜಿ ಉಪಾಧ್ಯಕ್ಷ ಬ್ರಿಯಾನ್ ಬೋಲಾಂಡ್ ಅವರು ಉಪಸ್ಥಿತರಿದ್ದ ಸುದ್ದಿಗೋಷ್ಠಿಯಲ್ಲಿ ಈ ಪತ್ರವನ್ನು ಬಹಿರಂಗಗೊಳಿಸಲಾಗಿದೆ.

ಭಾರತದಲ್ಲಿ ಫೇಸ್ಬುಕ್ ವೇದಿಕೆಯನ್ನು ಬಳಸಿಕೊಂಡು ಪ್ರಚೋದನಾತ್ಮಕ ಮುಸ್ಲಿಂ ವಿರೋಧಿ ನಿರೂಪಣೆಗಳ ಬಗ್ಗೆ ಕಂಪನಿಗೆ ಗೊತ್ತಿದ್ದರೂ ಅದನ್ನು ತಡೆಯಲು ಅದು ಹೇಳಿಕೊಳ್ಳುವಂತಹ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಹಾಗೆನ್ ಅಕ್ಟೋಬರ್ ನಲ್ಲಿ ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದರು. ಆರೆಸ್ಸೆಸ್ ಬಳಕೆದಾರರು, ಗುಂಪುಗಳು ಮತ್ತು ಪೇಜ್ಗಳು ಉತ್ತೇಜಿಸಿದ್ದ ‘ಭೀತಿಯನ್ನು ಹುಟ್ಟಿಸುವ ವಿಷಯ’ಗಳನ್ನು ಪ್ರಸ್ತಾಪಿಸಿದ್ದ ಕಂಪನಿಯ ಆಂತರಿಕ ದಾಖಲೆಗಳನ್ನು ಅವರು ಉಲ್ಲೇಖಿಸಿದ್ದರು.

ಮುಸ್ಲಿಮರನ್ನು ಅವಹೇಳನ ಮಾಡುವ ಹಲವಾರು ಪೋಸ್ಟ್ಗಳು ಮತ್ತು ತಮ್ಮ ಕುಟುಂಬದ ಮಹಿಳೆಯರ ಮೇಲೆ ಅತ್ಯಾಚಾರವೆಸಗುವಂತೆ ಕುರ್ಆನ್ ಮುಸ್ಲಿಂ ಪುರುಷರಿಗೆ ಕರೆ ನೀಡುತ್ತದೆ ಎಂಬ ತಪ್ಪುಮಾಹಿತಿಯನ್ನು ಫೇಸ್ಬುಕ್ನಲ್ಲಿ ಹರಿಬಿಡಲಾಗುತ್ತಿದೆ ಎಂದು ಕಂಪನಿಯ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂದೂ ಅವರು ಹೇಳಿದ್ದರು. ಫೇಸ್ಬುಕ್ ಈ ವಿಷಯದಲ್ಲಿ ಕ್ರಮವನ್ನು ಕೈಗೊಳ್ಳದಂತೆ ‘ರಾಜಕೀಯ ಪರಿಗಣನೆಗಳು’ ತಡೆದಿವೆ ಎಂದೂ ಅವರು ಪ್ರತಿಪಾದಿಸಿದ್ದರು.
ಬುಧವಾರದ ಸುದ್ದಿಗೋಷ್ಠಿಯಲ್ಲಿ ವಿಷಲ್ ಬ್ಲೋವರ್ ಗಳು ‘ದಿ ವಾಲ್ಸ್ಟ್ರೀಟ್ ಜರ್ನಲ್’ನಲ್ಲಿಯ ಇತ್ತೀಚಿನ ವರದಿಯೊಂದನ್ನು ಪ್ರಸ್ತಾಪಿಸಿದರು.

ಫೇಸ್ಬುಕ್ ಮಾನವ ಹಕ್ಕುಗಳ ತಂಡವು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಇವುಗಳನ್ನು ಮಾನವ ಹಕ್ಕುಗಳ ಮೇಲೆ ಪ್ರಭಾವದ ವ್ಯಾಪ್ತಿಯನ್ನು ಕಿರಿದಾಗಿಸಲು ಮಾಡಲಾಗಿರುವ ಪ್ರಯತ್ನವೆಂದು ಗ್ರಹಿಸಬಹುದಾಗಿದೆ ಎಂದು ವಾಲ್ ಸ್ಟ್ರೀಟ್ ತನ್ನ ವರದಿಯಲ್ಲಿ ಹೇಳಿದೆ.

ತನ್ನ ಕಾರ್ಯಾಚರಣೆಗಳು ಮುಸುಕಿನ ಹಿಂದೆ ನಡೆಯುತ್ತವೆ ಎನ್ನುವುದು ಫೇಸ್ಬುಕ್ ಗೆ ಗೊತ್ತಿದೆ. ಫೇಸ್ಬುಕ್ ವರದಿಯನ್ನು ಪ್ರಕಟಿಸದಿದ್ದರೆ ಭಾರತವು ತಾನು ಹೊಂದಬೇಕಾದ ಸುರಕ್ಷತೆಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಹಾಗೆನ್ ಬುಧವಾರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಡಾ.ಝಫರುಲ್-ಇಸ್ಲಾಂ ಖಾನ್ ಅವರು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ನಡೆಯುತ್ತಿರುವ ದ್ವೇಷದ ನಿರಂತರ ವಾಗ್ದಾಳಿಯನ್ನು ಎತ್ತಿ ತೋರಿಸಿದರು.

ಭಾರತೀಯ ಮುಸ್ಲಿಮರನ್ನು ವಸ್ತುಶಃ ಅಮಾನವೀಯಗೊಳಿಸಲಾಗಿದೆ, ಅವರನ್ನು ಅಸಹಾಯಕರು ಮತ್ತು ಧ್ವನಿಯಿಲ್ಲದವರನ್ನಾಗಿ ಮಾಡಲಾಗಿದೆ. ಇದು ಎಷ್ಟರ ಮಟ್ಟಿಗಿದೆಯೆಂದರೆ ಈಗ ಭಾರತೀಯ ಮುಸ್ಲಿಮರ ನರಮೇಧ ನಡೆಸುವ ಮಾತುಗಳೂ ಕೇಳಿಬರುತ್ತಿವೆ ಎಂದರು. ದ್ವೇಷವು ದೇಶದಲ್ಲಿನ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಲಿತರಿಗೆ ಹಾನಿಯನ್ನುಂಟು ಮಾಡಲು ‘ಭಾರತದ ಸರಕಾರಿ ಯೋಜನೆ’ಯಾಗಿದೆ ಎಂದು ಹೇಳಿದ ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟ್ಲವಾಡ್ ಅವರು, ನರಮೇಧದ ಕರೆಗಳಿಗೆ ಉತ್ತೇಜನ ನೀಡುವಲ್ಲಿ ಫೇಸ್ಬುಕ್ ಪಾಲ್ಗೊಳ್ಳುತ್ತಿರುವುದು ಆಘಾತಕಾರಿಯಾಗಿದೆ ಮತ್ತು ಸ್ವೀಕಾರಾರ್ಹವಲ್ಲ ಎಂದರು.

ಈ ನಡುವೆ ಸುದ್ದಿಗೋಷ್ಠಿಗೆ ಕೆಲವೇ ಗಂಟೆಗಳ ಮುನ್ನ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಫೇಸಬುಕ್ ನ ಮಾನವ ಹಕ್ಕುಗಳ ನೀತಿ ಮುಖ್ಯಸ್ಥೆ ಸಿಸನ್ಸ್, ‘ಈ ಕೆಲಸದ ಸಂಕೀರ್ಣತೆಯನ್ನು ಪರಿಗಣಿಸಿದರೆ ಈ ಮೌಲ್ಯಮಾಪನಗಳು ಸಮಗ್ರವಾಗಿರಬೇಕು ಎಂದು ನಾವು ಬಯಸಿದ್ದೇವೆ. ನಮ್ಮ ಮಾನವ ಹಕ್ಕುಗಳ ನೀತಿಗೆ ಅನುಗುಣವಾಗಿ ನಾವು ಮಾನವ ಹಕ್ಕುಗಳ ಮೇಲಿನ ಪರಿಣಾಮಗಳನ್ನು ಹೇಗೆ ನಿರ್ವಹಿಸಲಿದ್ದೇವೆ ಎನ್ನುವುದನ್ನು ನಾವು ವಾರ್ಷಿಕವಾಗಿ ವರದಿ ಮಾಡುತ್ತೇವೆ’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News