ಸಚಿವ ಸಂಪುಟ ಪುನಾರಚನೆ: ಕುತೂಹಲ ಸೃಷ್ಟಿಸಿದ ಯತ್ನಾಳ್-ರೇಣುಕಾಚಾರ್ಯ ರಹಸ್ಯ ಮಾತುಕತೆ

Update: 2022-01-20 12:52 GMT

ಬೆಂಗಳೂರು, ಜ. 20: ಸಿಎಂ ರಾಜಕೀಯ ಕಾರ್ಯದರ್ಶಿ , ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿರುವುದು ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಗುರುವಾರ ವಿಕಾಸಸೌಧದಲ್ಲಿರುವ ರೇಣುಕಾಚಾರ್ಯ ಅವರ ಕಚೇರಿಯಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದ್ದು, ಹಲವು ಸಂಶಯಗಳನ್ನು ಸೃಷ್ಟಿಸಿದೆ. ಸಚಿವ ಸಂಪುಟ ಪುನಾರಚನೆ, ಕೆಲ ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಕಲ್ಪಿಸಲಿದ್ದಾರೆಂಬ ಸುದ್ದಿಗಳ ಹಿನ್ನೆಲೆಯಲ್ಲಿ ಇಬ್ಬರ ಭೇಟಿ ಮಹತ್ವ ಪಡೆದುಕೊಂಡಿದೆ.

ಯಾವ ಮಾದರಿಯೋ ಗೊತ್ತಿಲ್ಲ: `ರಾಜ್ಯ ಸಚಿವ ಸಂಪುಟ ಪುನಾರಚನೆ ಗುಜರಾತ್ ಮಾದರಿಯಲ್ಲಿ ಆಗುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿ ಮಾಡಲಿದ್ದಾರೆಯೋ ನೋಡೋಣ. ಇನ್ನೂ ಹದಿನೈದು ದಿನಗಳಲ್ಲಿ ಸಂಪುಟ ಪುನಾರಚನೆ ಆದರೆ ಒಳ್ಳೆಯದು. ಮಾರ್ಚ್ ನಂತರ ಸಚಿವ ಸಂಪುಟ ಪುನರ್ ರಚನೆ ಮಾಡಿದರೆ ಉಪಯೋಗವಿಲ್ಲ. ಶೀಘ್ರವೇ ಸಂಪುಟ ಪುನರ್ ರಚನೆ ಮಾಡಿದರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಸಮಾಲೋಚನೆ ಬಳಿಕ ಮಾತನಾಡಿದ ಅವರು, `ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರದ ಬಗ್ಗೆ ನಾನು ಏನು ಹೇಳಲು ಆಗುವುದಿಲ್ಲ. ಪಂಚರಾಜ್ಯಗಳ ಚುನಾವಣೆ ಮುಗಿದ ಮೇಲೆ ಆಗುತ್ತದೆಯೋ ಅಥವಾ ಅದಕ್ಕಿಂತ ಮೊದಲೇ ಆಗುತ್ತದೆಯೋ ಗೊತ್ತಿಲ್ಲ. ಆದರೆ, ಒಳ್ಳೆಯ ಬೆಳವಣಿಗೆ ಆಗಲಿದೆ. ಎಂ.ಪಿ.ರೇಣುಕಾಚಾರ್ಯ ಮಂತ್ರಿ ಆಗಬೇಕು ಎಂದು ಯತ್ನಾಳ್ ಆಶಯ ವ್ಯಕ್ತಪಡಿಸಿದರು.

ರೇಣುಕಾಚಾರ್ಯ, ಬಿಎಸ್‍ವೈ ಅವರ ನಾಯಕತ್ವ ಅಥವಾ ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಒಪ್ಪಿಕೊಂಡಿದ್ದರೂ ಅವರು ಬಿಜೆಪಿ ನಾಯಕತ್ವ ಒಪ್ಪಿಕೊಂಡಿದ್ದಾರೆ ಎಂದ ಅವರು, ಇದೀಗ ದೇಶವನ್ನು ಕಾಡುತ್ತಿರುವ ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರಕಾರ ಸಮರ್ಥವಾಗಿ ಕೆಲಸ ಮಾಡಬೇಕು. ಆ ಬಳಿಕ ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡಲಿದೆಯೋ ಕಾದು ನೋಡೋಣ ಎಂದು ಅವರು ತಿಳಿಸಿದರು.

ಸೌಜನ್ಯದ ಭೇಟಿ: ನನ್ನ ಮತ್ತು ಹಿರಿಯರಾದ ಯತ್ನಾಳ್ ಅವರ ಭೇಟಿ ಆಕಸ್ಮಿಕ, ಇದೊಂದು ಸೌಜನ್ಯದ ಭೇಟಿ. ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ಸದುದ್ದೇಶದಿಂದ ಇಬ್ಬರು ಮಾತುಕತೆ ನಡೆಸಿದ್ದೇವೆ, ಪಾದಯಾತ್ರೆಯ ಮೂಲಕ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವೇಗ ತಡೆಯಲು ಇಬ್ಬರು ಚರ್ಚೆ ಮಾಡಿದ್ದೇವೆ ಎಂದು ರೇಣುಕಾಚಾರ್ಯ ತಿಳಿಸಿದರು.
ನಾವು ಇಬ್ಬರು ಯಾರ ವಿರುದ್ಧವೂ ಇಲ್ಲಿ ಸಭೆ ನಡೆಸಿಲ್ಲ. ನಮಗೆ ವೈಯಕ್ತಿಕವಾಗಿ ಯಾರ ಮೇಲೂ ಆಕ್ರೋಶವೂ ಇಲ್ಲ. ಸಂಘಟನೆ ಹಾಗೂ ಸರಕಾರಕ್ಕೆ ಯಾರು ಒಳ್ಳೆಯ ಕೆಲಸ ಮಾಡಿದವರೂ ಅವರನ್ನು ಮುಂದುವರೆಸುವುದು ಒಳ್ಳೆಯದು. ಅಧಿಕಾರ ವಹಿಸಿಕೊಂಡಿರುವವರನ್ನು ಹಾಗೂ ಸ್ವಾರ್ಥಕೋರರನ್ನು ಸಂಪುಟದಿಂದ ಕೈಬಿಡಬೇಕು. ಆದರೆ, ನಾವು ಯಾರ ಹೆಸರನ್ನೂ ಹೇಳುವುದಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಅಗತ್ಯವಿದ್ದರೆ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡುತ್ತೇವೆ. ಜತೆಗೆ ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಇದರಲ್ಲಿ ನಮಗೆ ಯಾವ ಸಂಕೋಚವೂ ಇಲ್ಲ. ಮುಂದಿನ ಬಾರಿ ಬಿಜೆಪಿ ದೇಶ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಗುರಿಯಾಗಿದೆ. ಪಕ್ಷದಲ್ಲಿರುವ ಎಲ್ಲ ಶಾಸಕರು ಮಾತನಾಡಲು ಆಗುತ್ತಿಲ್ಲ. ಇದನ್ನು ಅನೇಕರು ನಮ್ಮ ಬಳಿ ಹೇಳಿದ್ದಾರೆ, ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತಾಡಿದ್ದೇವೆ. ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದು ಅವರು ತಿಳಿಸಿದರು.

ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು. ಅವರು ಈ ಹಿಂದೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅಂತಹವರು ಸಂಪುಟದಲ್ಲಿ ಇರಬೇಕೆಂಬುದು ನನ್ನ ಆಸೆ. ಅವರು ಮಂತ್ರಿಯಾಗಲಿ ಎಂದು ಶುಭಕೋರುತ್ತೇನೆ. ಸರಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಒಳ್ಳೆಯ ತೀರ್ಮಾನ ಕೈಗೊಳ್ಳಲಿದ್ದಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News