ಮಸೀದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಋಷಿಕುಮಾರ ಸ್ವಾಮಿಗೆ ಜಾಮೀನು

Update: 2022-01-20 15:40 GMT
ಋಷಿಕುಮಾರಸ್ವಾಮಿ

ಮಂಡ್ಯ, ಜ.20: ಐತಿಹಾಸಿಕ ಶ್ರೀರಂಗಪಟ್ಟಣದ ಟಿಪ್ಪುಸುಲ್ತಾನ್ ಕಾಲದ ಜಾಮಿಯಾ ಮಸೀದಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವೀಡಿಯೋ ಬಿಡುಗಡೆ ಮಾಡಿ ಜೈಲು ಸೇರಿದ್ದ ಚಿಕ್ಕಮಗಳೂರು ಜಿಲ್ಲೆ ಕಾಳಿಕಾಶ್ರಮದ ಋಷಿಕುಮಾರಸ್ವಾಮಿ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. 

ಮಂಗಳವಾರ ಶ್ರೀರಂಗಪಟ್ಟಣ ಪೊಲೀಸರು ಸ್ವಾಮೀಜಿಯನ್ನು ಮಠದಿಂದ ಬಂಧಿಸಿದ್ದರು. ಅವರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದರು. ಈ ನಡುವೆ ಸ್ವಾಮೀಜಿ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು(ಗುರುವಾರ) ಇತ್ತು.

ವಿಚಾರಣೆ ನಡೆಸಿದ ಶ್ರೀರಂಗಪಟ್ಟಣದ ಹೆಚ್ಚುವರಿ ಕಿರಿಯ ಶ್ರೇಣಿ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶೆ ಆಯೇಷಾ ಪಿ.ಮುಜೀದ್, 1 ಲಕ್ಷ ರೂ. ಮೌಲ್ಯದ ಬಾಂಡ್, ಪ್ರಕರಣದ ಸಾಕ್ಷಿಗಳನ್ನು ಬೆದರಿಸಬಾರದೆಂಬ ಷರತ್ತಿನ ಮೇರೆಗೆ ಸ್ಮಾಮೀಜಿಯನ್ನು ಬಿಡುಗಡೆ ಮಾಡಲು ಜಾಮೀನು ಮಂಜೂರು ಮಾಡಿದರು.

ಸ್ವಾಮೀಜಿ ಪರವಾಗಿ ವಕೀಲರಾದ ಟಿ.ಬಾಲರಾಜು, ಎಸ್.ಆರ್.ಸಿದ್ದೇಶ್, ಎ.ಟಿ.ವಿಜಯಕುಮಾರ್ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. 

ಇತ್ತೇಚೆಗೆ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದ ಋಷಿಕುಮಾರಸ್ವಾಮಿ, ‘ಜಾಮಿಯಾ ಮಸೀದಿಯನ್ನು ಒಡೆದು ಹನುಮ ಮಂದಿರ ಕಟ್ಟುತ್ತೇವೆ’ ಎಂದು ವೀಡಿಯೋವನ್ನು ಸಾಮಾಜಿಕ ಜಾಲತಾತಣದಲ್ಲಿ ಹಾಕಿದ್ದರು. ಈ ಸಂಬಂಧ ಸ್ವಾಮಿ ವಿರುದ್ದ ಮಸೀದಿ ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ್ದ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ಶ್ರೀರಂಗಪಟ್ಟಣ ಪೊಲೀಸರಿಗೆ ದೂರು ನೀಡಲಾಗಿತ್ತು. ಹಾಗಾಗಿ ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News