ರಾಜ್ಯಗಳಿಗೆ 47,541 ಕೋ.ರೂ.ತೆರಿಗೆ ಮುಂಗಡ ಕಂತು ಬಿಡುಗಡೆಗೆ ನಿರ್ಮಲಾ ಸೀತಾರಾಮನ್ ಅನುಮತಿ

Update: 2022-01-20 16:29 GMT
ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಜ.20: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳಿಗೆ 47,541 ಕೋ.ರೂ.ಗಳ ತೆರಿಗೆ ಹಂಚಿಕೆ ಮುಂಗಡ ಕಂತನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ್ದಾರೆ ಎಂದು ವಿತ್ತ ಸಚಿವಾಲಯವು ಗುರುವಾರ ತಿಳಿಸಿದೆ.

ಇದು ಇಂದು ಬಿಡುಗಡೆಗೊಳಿಸುತ್ತಿರುವ 2022 ಜನವರಿ ತಿಂಗಳ ನಿಯಮಿತ ಹಂಚಿಕೆಗೆ ಹೆಚ್ಚುವರಿಯಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಇದರೊಂದಿಗೆ ರಾಜ್ಯಗಳು ಒಟ್ಟು 95,082 ಕೋ.ರೂ.ಗಳನ್ನು ಅಥವಾ ಜನವರಿ ತಿಂಗಳಿಗೆ ತಮಗೆ ಹಂಚಿಕೆಯಾಗಬೇಕಿದ್ದ ಮೊಬಲಗಿನ ದುಪ್ಪಟ್ಟು ಹಣವನ್ನು ಪಡೆಯಲಿವೆ. ಕೇಂದ್ರ ಸರಕಾರವು 2021,ನ.22ರಂದು 47,541 ಕೋ.ರೂ.ಗಳ ತೆರಿಗೆ ಹಂಚಿಕೆಯ ಮೊದಲ ಮುಂಗಡ ಕಂತನ್ನು ಬಿಡುಗಡೆ ಮಾಡಿತ್ತು.

ಗುರುವಾರ ಎರಡನೇ ಕಂತಿನ ಬಿಡುಗಡೆಯೊಂದಿಗೆ ರಾಜ್ಯಗಳು ತೆರಿಗೆ ಹಂಚಿಕೆಯಡಿ 2022ರ ಜನವರಿವರೆಗೆ ಬಿಡುಗಡೆಗೊಳಿಸಲು ನಿಗದಿಗೊಳಿಸಿದ್ದ ಮೊತ್ತಕ್ಕೆ ಹೆಚ್ಚುವರಿಯಾಗಿ 90,082 ಕೋ.ರೂ.ಗಳನ್ನು ಪಡೆಯಲಿವೆ.

2021-22ನೇ ವಿತ್ತವರ್ಷದಲ್ಲಿ ಜಿಎಸ್‌ಟಿ ಕೊರತೆಯನ್ನು ಭರಿಸಲು ಕೇಂದ್ರ ಸರಕಾರವು ರಾಜ್ಯಗಳಿಗೆ ಬಿಡುಗಡೆಗೊಳಿಸಿದ್ದ 1.59 ಲ.ರೂ.ಗಳ ನಿರಂತರ ಸಾಲವು 2021 ಅಕ್ಟೋಬರ್‌ಗೆ ಪೂರ್ಣಗೊಂಡಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು ಎಂದು ವಿತ್ತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕದ ಹಾನಿಕಾರಕ ಪರಿಣಾಮಗಳಿಂದ ಸುಧಾರಿಸಿಕೊಳ್ಳಲು ತಮ್ಮ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಹೆಚ್ಚಿಸಲು ರಾಜ್ಯಗಳ ಕೈಗಳನ್ನು ಬಲಗೊಳಿಸುವ ತನ್ನ ಬಾಧ್ಯತೆಯ ಭಾಗವಾಗಿ ಕೇಂದ್ರವು ಅವುಗಳಿಗೆ ಮುಂಗಡ ಪಾವತಿಗಳನ್ನು ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News