ರಾಷ್ಟ್ರದ ಸಮಗ್ರ ಶಾಂತಿಗಾಗಿ ಬೈಸಿಕಲ್‍ನಲ್ಲಿ ದೇಶ ಪರ್ಯಟನೆ ನಡೆಸುತ್ತಿರುವ ಜಾರ್ಖಂಡ್‍ನ ಆದಿರಾಜ್

Update: 2022-01-21 05:07 GMT
 ಆದಿರಾಜ್

ಮೈಸೂರು,ಜ: ರಾಷ್ಟ್ರದ ಸಮಗ್ರ ಶಾಂತಿಗಾಗಿ ಯುವಕನೋರ್ವ ಬೈಸಿಕಲ್‍ನಲ್ಲಿ ಸಂಚರಿಸುವ ಮೂಲಕ ದೇಶ ಪರ್ಯಟನೆಯಲ್ಲಿ ತೊಡಗಿದ್ದಾರೆ.

ರಾಷ್ಟ್ರದಲ್ಲಿನ ಅರಾಜಕತೆ, ಕೋಮುಗಲಭೆ, ಗಡಿ,ನೆಲ, ಜಲ ಭಾಷೆಗಾಗಿ ನಡೆಯುತ್ರಿರುವ ಪರಸ್ಪರ ಯುದ್ಧ, ಹಣಕ್ಕಾಗಿ ನಡೆಯುವ ಬಡಿದಾಟ ಸೇರಿದಂತೆ ದೇಶದಲ್ಲಿ ಅಶಾಂತಿ ಯನ್ನು ತೊಡೆದು ಹಾಕುವಯ ಉದ್ದೇಶದಿಂದ ಆದಿರಾಜ್ ಬುರುವಾ ಎಂಬ ಯುವಕ ಜಾರ್ಖಂಡ್‍ನ ಜೆಮ್ಶೆಡ್ ಪುರದಿಂದ 2021 ರ ಅಕ್ಟೋಬರ್ 1 ರಿಂದ ರಾಷ್ಟ್ರ ಶಾಂತಿಗಾಗಿ ಬೈಸಿಕಲ್‍ನಲ್ಲಿ ಸಂಚರಿಸುವ ಮೂಲಕ ದೇಶ ಪರ್ಯಟನೆಯಲ್ಲಿ ತೊಡಗಿದ್ದಾರೆ.

ಒಂದು ಹಳೆಯ ಬೈಸಿಕಲ್ ನ ಮುಂಭಾಗದಲ್ಲಿ ಟಾಟಾ ಎಂಬ ಫಲಕವನ್ನು ಹಾಕಿಕೊಂಡು ಬೈಸಿಕಲ್‍ನ ಹಿಂಬದಿ ಕಲ್ಯಾರಿಯರ್ ಮೇಲೆ ಅವರ ಬಟ್ಟೆ, ಹೊದಿಕೆ ಮತ್ತು ಸಣ್ಣ ಹಾಸಿಗೆಯೊಂದರ ಮೂಟೆಯನ್ನು ಕಟ್ಟಿಕೊಂಡು 27 ವರ್ಷದ ಯುವಕ ಆದಿರಾಜ್ ಬರುವಾ ಭಾರತದ ತುಂಬಾ ಮಾನವ ಪ್ರೀತಿಯನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಶಾಂತಿ ತತ್ವ, ಸಹಬಾಳ್ವೆ ಜಾಗೃತಿ ಮೂಡಿಸಲು ಬೈಸಿಕಲ್ ನಲ್ಲೇ ಸಂಚರಿಸುತ್ತಿದ್ದಾರೆ.

ತಮಿಳುನಾಡಿನಿಂದ ಗುರುವಾರ ಮೈಸೂರಿನ ಕಡೆ ಪ್ರಯಾಣ ಬೆಳೆಸಿ ಬರುತ್ತಿದ್ದ ವೇಳೆ ನಂಜನಗೂಡು-ಮೈಸೂರು ರಸ್ತೆಯ ತಾಂಡವಪುರ ಬಳಿ ಕಂಡು ಬಂದ ಅವರನ್ನು ಮಾತನಾಡಿಸಿದಾಗ ತಾವು ಕೈಗೊಂಡಿರುವ ಶಾಂತಿಯಾತ್ರೆಯ ವಿಷಯವನ್ನು ಉತ್ಸಾಹದಿಂದ ಹಂಚಿಕೊಂಡರು.

ಬಿಎಸ್ಸಿ ಪದವೀದರರಾದ ಇವರು ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2021 ರ ಅಕ್ಟೋಬರ್ 1 ರಂದು ಜಾರ್ಖಂಡ್‍ನ ಜೆಮ್ಶೆಡ್ ಪುರದಿಂದ ಯಾತ್ರೆ ಆರಂಭಿಸಿರುವ ಅವರು ಇಲ್ಲಿವರೆಗೆ ಒಡಿಶಾ, ತಮಿಳುನಾಡು, ತೆಲಂಗಾಣ,ಆಂಧ್ರ ಪ್ರದೇಶ, ಕೇರಳ, ಕರ್ನಾಟಕ, ಸೇರಿದಂತೆ 8 ರಾಜ್ಯಗಳಲ್ಲಿ ಸಂಚಾರ ನಡೆಸಿ ಸಮಗ್ರ ಶಾಂತಿಗಾಗಿ ಜಾಗೃತಿ ಕೈಗೊಂಡಿದ್ದಾರೆ.

ಇಂದು ಮೈಸೂರಿನಲ್ಲಿ ತಂಗಿ ನಾಳೆ ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಹಾಸನ ಶ್ರವಣಬೆಳಗೋಳ ಮೂಲಕ ಮಂಗಳೂರಿಗೆ ಹೋಗುವುದಾಗಿ ತಿಳಿಸಿದರು.

ಪ್ರತಿದಿನ ಬೆಳಿಗ್ಗೆಯಿಂದ ಸಂಜೆವರೆಗೆ ಬೈಸಿಕಲ್‍ನಲ್ಲಿ ಸಂಚರಿಸಿ ರಾತ್ರಿ ಆಗುತ್ತಿದ್ದಂತೆ ಸ್ಥಳೀಯ ಸರ್ಕಾರೇತರ ಸಂಸ್ಥೆ, ಎನ್‍ಜಿಓ ಗಳನ್ನು ಸಂಪರ್ಕಿಸಿ ವಾಸ್ತವ್ಯ ಮತ್ತು ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇವರು ಹೋದಕಡೆಯಲ್ಲ ರೋಟರಿ, ಲಯನ್ಸ್ ಮತ್ತಿತರ ಎನ್‍ಜಿಓಗಳ ಸಹಕಾರ ಲಭಿಸಲಿದೆ. ಅಲ್ಲದೆ ಸಾರ್ವಜನಿಕರಿಂದಲೂ ಅತ್ಯುತ್ತಮ ಸ್ಪಂದನೆ ದೊರೆತಿದೆ ಎಂದು ಅದಿತ್ಯರಾಜ್ ಬರುವ ತಿಳಿಸಿದರು.

''ನನ್ನ ತಂದೆ ಅಲೋಕ್ ರಂಜನ್ ಬರುವಾ ಅವರು ಕೂಡ ದೇಶದ ಸಮಗ್ರ ಶಾಂತಿಗಾಗಿ 1987 ರಿಂದ 1989 ರವರೆಗೆ ದೇಶಾದ್ಯಂತ ಬೈಸಿಕಲ್‍ನಲ್ಲಿ ಸಂಚರಿಸಿದ್ದರು. ಅವರ ಸ್ಪೂರ್ತಿಯಿಂದ ನಾನೂ ಕೂಡ ಶಾಂತಿಗಾಗಿ ದೇಶವ್ಯಾಪಿ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ದೇಶದಲ್ಲಿನ ಸಮಗ್ರಶಾಂತಿಗಾಗಿ ನಾನು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ನಾನು 2021 ಅಕ್ಟೋಬರ್ 1 ರಂದು ಯಾತ್ರೆ ಆರಂಭಿಸಿದ್ದು, 2023 ಮಾರ್ಚ್ ಎರಡನೇ ವಾರದೊಳಗೆ ನಾನು ಯಾತ್ರೆ ಆರಂಭಿಸಿದ ಜಾರ್ಖಂಡ್‍ನ ಜೆಮ್ಶೆಡ್‍ಪುರಕ್ಕೆ ವಾಪಾಸಾಗುತ್ತೇನೆ ಎಂದು ಹೇಳಿದರು.''

 ಅಧಿತ್ಯರಾಜ್ ಬುರುವಾ

Writer - ನೇರಳೆ ಸತೀಶ್‍ಕುಮಾರ್

contributor

Editor - ನೇರಳೆ ಸತೀಶ್‍ಕುಮಾರ್

contributor

Similar News