ಹೋರಾಟಗಳ ಹೊರತಾಗಿಯೂ 'ತುಳು ಭಾಷೆ'ಯನ್ನು 8ನೆ ಪರಿಚ್ಛೇದಕ್ಕೆ ಸೇರಿಸದಿರುವುದು ವಿಷಾದನೀಯ: ಪ್ರೊ.ಕೆ.ಚಿನ್ನಪ್ಪಗೌಡ

Update: 2022-01-21 14:19 GMT

ಮಂಗಳೂರು, ಜ.21: ದೇಶದಲ್ಲಿ ಕೇವಲ 22 ಮಾತ್ರ ಅಧಿಕೃತ ಅಥವಾ ಮಾನ್ಯತೆ ಪಡೆದ ಭಾಷೆಗಳಿರುವುದಲ್ಲ. ದೇಶಾದ್ಯಂತದ ಜನರು ಮಾತನಾಡುವ 19 ಸಾವಿರಕ್ಕೂ ಅಧಿಕ ಭಾಷೆಗಳೂ ಕೂಡ ಅಧಿಕೃತವೇ ಆಗಿದೆ. ಸಾಹಿತ್ಯ, ಸಂಸ್ಕೃತಿ, ಕಲೆ, ಭಾಷಿಗರ ಸಂಖ್ಯೆ ಇತ್ಯಾದಿಯನ್ನು ಆಧರಿಸಿಕೊಂಡು ತುಳು ಭಾಷೆಗೆ ಮಾನ್ಯತೆ ನೀಡಬೇಕು ಮತ್ತು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ. ಹೋರಾಟಗಳನ್ನೂ ಮಾಡಲಾಗಿದೆ. ಆದರೆ ಸರಕಾರ ಈವರೆಗೂ ಅದಕ್ಕೆ ಸ್ಪಂದಿಸದಿರುವುದು ವಿಷಾದನೀಯ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪಗೌಡ ಹೇಳಿದರು.

ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ತುಳು ಮತ್ತು ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಸಂಸತ್ತಿನಲ್ಲಿ ಆಗ್ರಹಿಸುತ್ತಾ ಬಂದಿದ್ದ ಬಿ.ಕೆ.ಹರಿಪ್ರಸಾದ್ ಅವರ ಭಾಷಣದ 1ನೆ ಭಾಗವಾದ ತುಳು-ಕೊಡುವ ಭಾಷೆಗಳ ಕುರಿತಾದ ಪುಸ್ತಕ 'ತುಳು- ಕೊಡವ ಭಾಷೆಗಳ ಅಳಿವು ಉಳಿವು' ಪುಸ್ತಕವನ್ನು ಶುಕ್ರವಾರ ನಗರದ ಬಲ್ಮಠ ಸಹೋದಯ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳು ಭಾಷೆಗೆ ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. 5 ಸಾವಿರಕ್ಕೂ ಅಧಿಕ ತುಳು ಕೃತಿಗಳು ಪ್ರಕಟವಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲೂ ತನ್ನದೇ ಆದ ವೈಶಿಷ್ಟವನ್ನು ಹೊಂದಿದೆ. ಲೇಖಕರು, ವಿದ್ವಾಂಸರಿಗೂ ಕೊರತೆ ಇಲ್ಲ. ವೈಜ್ಞಾನಿಕವಾದ, ಶಾಸ್ತ್ರೀಯ ತಳಹದಿಯ ಆಧಾರದ ಮೇಲೆ ಎಲ್ಲಾ ದಾಖಲೆಗಳನ್ನು ಮುಂದಿಟ್ಟುಕೊಂಡು ತುಳುವಿಗೆ ಮಾನ್ಯತೆ ಕೊಡಿ ಎಂದು ಬೇಡಿಕೊಂಡರೂ ಕೂಡ ಇನ್ನೂ ಕೊಡದಿರಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎನ್ನುವ ಬದಲು ಅಧಿಕಾರಶಾಹಿಗಳ ಮನಸ್ಥಿತಿಯೇ ಕಾರಣ ಎಂದರೆ ತಪ್ಪಾಗಲಾರದು. ಆಳುವ ವರ್ಗದ ಇಂತಹ ನಿಲುವು ಪ್ರಜಾಪ್ರಭುತ್ವಕ್ಕೂ ಮಾರಕವಾಗಿದೆ. ಸರಕಾರದ ಈ ಜಾಣ ಮೌನ, ಧೋರಣೆಯಿಂದ ತುಳು ಸಂಘಟಕರಿಗೆ ಅಪಾರ ನೋವಾಗಿದೆ ಎಂದ ಪ್ರೊ.ಕೆ.ಚಿನ್ನಪ್ಪ ಗೌಡ, ತುಳು ಭಾಷೆಗೆ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿ ಯಾರ ವಿರೋಧವಿದೆ ಎಂಬುದೂ ಗೊತ್ತಾಗುತ್ತಿಲ್ಲ. ಕೊಡದಿರಲು ಕಾರಣ ಏನು ಎಂಬುದನ್ನೂ ತಿಳಿಸುವುದಿಲ್ಲ. ಇಂತಹ ಬೇಡಿಕೆಗಳನ್ನು ಮುಂದಿಟ್ಟಾಗಲೆಲ್ಲಾ ತುಳುವರನ್ನು ಪ್ರತ್ಯೇಕವಾದಿಗಳಂತೆ ಕಾಣುತ್ತಿರುವುದು ವಿಪರ್ಯಾಸ ಎಂದರು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ 'ವಾರ್ತಾಭಾರತಿ' ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ''ದೇಶದಲ್ಲಿ 46 ಲಕ್ಷಕ್ಕೂ ಅಧಿಕ ಜಾತಿಗಳಿವೆ. 19,560 ಕ್ಕೂ ಅಧಿಕ ಭಾಷೆಗಳಿವೆ. ದೇಶದ ಪ್ರತೀ 8 ಕಿ.ಮೀ.ಅಂತರದಲ್ಲಿ ಭಾಷೆಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಪ್ರತಿಯೊಬ್ಬರೂ ಮಾತೃಭಾಷೆಯನ್ನು ಗೌರವಿಸುತ್ತಲೇ ಇತರರು ಮಾತನಾಡುವ ಭಾಷೆಗೂ ಮಾನ್ಯತೆ ನೀಡಬೇಕು'' ಎಂದರು.

ಕೇವಲ 24 ಸಾವಿರ ಜನರು ಮಾತನಾಡುವ ಸಂಸ್ಕೃತ ಭಾಷೆಯ ಬೆಳವಣಿಗೆಗೆ ಸರಕಾರ ಕೋಟ್ಯಂತರ ರೂ. ಅನುದಾನ ನೀಡುತ್ತದೆ. ಆದರೆ ತುಳು ಭಾಷೆಯ ಅಭಿವೃದ್ಧಿಗೆ ಸರಕಾರ ಬೆಂಬಲ ನಿರೀಕ್ಷಿಸಿದಷ್ಟಿಲ್ಲ. ಹಾಗಾಗಿ ಸರಕಾರವು ಭಾಷೆಗಳ ಬಗ್ಗೆ ಮಡಿವಂತಿಕೆ ತೋರದೆ ಸಮಾನವಾಗಿ ಕಾಣಬೇಕು ಎಂದು ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ 'ಹಿಂದಿ ರಾಷ್ಟ್ರಭಾಷೆಯಲ್ಲ. ಅದು ಕೇವಲ ವ್ಯವಹಾರಿಕ ಭಾಷೆಯಾಗಿದೆ. ಹಿಂದಿ ರಾಷ್ಟ್ರ ಭಾಷೆಯಾಗುವುದಾದರೆ ಕನ್ನಡವೂ ರಾಷ್ಟ್ರಭಾಷೆಯಾಗಬೇಕು. ದೇಶದ 22 ಮಾನ್ಯತೆ ಪಡೆದ ಭಾಷೆಗಳ ಪೈಕಿ 18 ಉತ್ತರ ಭಾರತದ ಭಾಷೆಗಳಾಗಿವೆ. ಉಳಿದವುಗಳು ದಕ್ಷಿಣ ಭಾರತದ ಭಾಷೆಗಳಾಗಿವೆ. ತುಳು, ಕೊಡವ ಭಾಷೆಗಳಲ್ಲದೆ ದೇಶದ 26 ಭಾಷೆಗಳು ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸೇರಲು ಸರತಿಯಲ್ಲಿವೆ ಎಂದರು.

ನೆಲ, ಸಂಸ್ಕೃತಿಗೆ ಅನ್ಯಾಯ ಆದಾಗ ರಾಜಕಾರಣಿಗಳು ಧ್ವನಿ ಎತ್ತದೆ ಕೇವಲ ತಮ್ಮ ಪಕ್ಷದ ಪರವಾಗಿ ಮಾತ್ರ ಮಾತನಾಡುವುದು ಸಂಸ್ಕೃತಿಗೆ ಎಸಗುವ ಅಪಚಾರವಾಗಿದೆ. ಹೀಗೆ ಮುಂದುವರಿದರೆ ದೇಶ ಸುಧಾರಣೆಯಾಗಲು ಇನ್ನು 500 ವರ್ಷಗಳಾದರೂ ಬೇಕಾದೀತು ಎಂದು ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಹಾಗೂ ಕೃತಿ ಸಂಪಾದಕ ಆರ್. ಜಯಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮಾನಾಥ ರೈ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಮೇಯರ್ ಶಶಿಧರ ಹೆಗ್ಡೆ ವಂದಿಸಿದರು.

ಕಾರ್ಯಕ್ರಮದ ಸಂಘಟಕರಾದ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕಾರ್ಪೊರೇಟರ್ ಅಬ್ದುರ್ರವೂಫ್ ಬಜಾಲ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News