'ಶಿರಾಡಿ ಘಾಟ್ ಹೆದ್ದಾರಿ ಉನ್ನತೀಕರಣ'ಕ್ಕೆ ಹಸಿರು ನಿಶಾನೆ: ಕೇಂದ್ರ ಸರಕಾರಕ್ಕೆ ಸಿಎಂ, ಸಚಿವರ ಅಭಿನಂದನೆ

Update: 2022-01-21 14:48 GMT

ಬೆಂಗಳೂರು, ಜ. 21: ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆ ಮತ್ತು ಬಹುದಿನಗಳ ಬೇಡಿಕೆಯಾಗಿದ್ದ ‘ಶಿರಾಡಿ ಘಾಟ್' ಹೆದ್ದಾರಿಯ ದುರಸ್ತಿ ಮತ್ತು ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಗೆ 1,200 ಕೋಟಿ ರೂ. ಕಾಮಗಾರಿಗಳಿಗೆ ಕೇಂದ್ರ ಸರಕಾರವು ಹಸಿರು ನಿಶಾನೆ ತೋರಿಸಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹೊಸದಿಲ್ಲಿಗೆ ತೆರಳಿ ‘ಶಿರಾಡಿಘಾಟ್' ಚತುಷ್ಪಥ ರಸ್ತೆ ಯೋಜನೆ ಜಾರಿಗೊಳಿಸುವಂತೆ ನಾವುಗಳು ಮಾಡಿಕೊಂಡ ಮನವಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ, ತುರ್ತಾಗಿ ಆದ್ಯತೆಯ ಮೇರೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿರುವುದು ಅವರ ಜನಪರ ಕಾಳಜಿಗೆ ನಿದರ್ಶನವಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ನಗರಿಯಾದ ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರಮುಖ ಸಂಪರ್ಕದ ಕೊಂಡಿಯಾಗಿದ್ದ ಶಿರಾಡಿ ಘಾಟ್ ರಸ್ತೆ ಪ್ರತಿವರ್ಷ ಮಳೆಗಾಲದಲ್ಲಿ ಭೂಕುಸಿತ ಮತ್ತಿತರ ಕಾರಣಗಳಿಂದ ಹಾನಿಗೊಂಡು ಸಂಚಾರ, ಸಂಪರ್ಕ ಸಾಗಾಟಕ್ಕೆ ತೀರಾ ತೊಂದರೆಯಾಗುತ್ತಿತ್ತು. ಈಗ ಶಿರಾಡಿ ಘಾಟ್ ಚತುಷ್ಪಥ ರಸ್ತೆ ವಿಸ್ತರಣೆಗೆ ಹಸಿರು ನಿಶಾನೆ ದೊರೆತಿರುವುದರಿಂದ ಬಹುಕಾಲದ ಈ ಸಮಸ್ಯೆಗೆ ಮುಕ್ತಿ ಸಿಗುವಂತಾಗಿದೆ ಎಂದು ಸಚಿವರಾದ ಸಿ.ಸಿ.ಪಾಟೀಲ ಅವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಯೋಜನೆ ಕೈಗೂಡುವಂತಾಗುವಲ್ಲಿ ಅಪಾರ ಶ್ರಮ ವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಅಲ್ಲದೆ, ಕೇಂದ್ರ ಸರಕಾರದಿಂದ ಅನುಮೋದನೆಗೊಂಡ ಈ ಯೋಜನೆಯನ್ನು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಉದ್ದೇಶ ನಮ್ಮದಾಗಿದೆ. ಯೋಜನೆಯಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ವರದಾನವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಿ.ಸಿ.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News