ಕರ್ತವ್ಯ ಮರೆತ ಪ್ರಧಾನಿಯಿಂದ ದೇಶಕ್ಕೆ ಕರ್ತವ್ಯದ ಬೋಧನೆ

Update: 2022-01-23 02:54 GMT

‘ಬಾಯಿ ತೆರೆದರೆ ಬಣ್ಣಗೇಡು’ ಎನ್ನುವ ಗಾದೆ ನಮ್ಮ ಪ್ರಧಾನಿ ಮೋದಿಯವರನ್ನೇ ಉಲ್ಲೇಖಿಸಿ ಸೃಷ್ಟಿಯಾಗಿರಬಹುದೇ? ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡಬೇಕಾದ ಪ್ರಧಾನಿ ಮೋದಿಯವರು ಸಮಾರಂಭವೊಂದರಲ್ಲಿ, ‘ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಕಾರಣಕ್ಕಾಗಿ ದೇಶ ಇನ್ನೂ ದುರ್ಬಲವಾಗಿದೆ’ ಎಂಬ ವಾದವೊಂದನ್ನು ಮಂಡಿಸಿದ್ದಾರೆ. ‘ಬ್ರಹ್ಮ ಕುಮಾರಿ ಸಂಘಟನೆ’ ಆಚರಿಸುತ್ತಿದ್ದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಕ್ಕುಗಳಿಗಾಗಿ ನಡೆಸುವ ಹೋರಾಟಗಳಿಂದ ದೇಶ ಕಳೆದ 75 ವರ್ಷಗಳಿಂದ ದುರ್ಬಲವಾಗಿದೆ. ಹಕ್ಕುಗಳಿಗಾಗಿ ಬಡಿದಾಡಿ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು, ಮುಂದಿನ 25 ವರ್ಷಗಳನ್ನು ಕರ್ತವ್ಯಗಳನ್ನು ನಿಭಾಯಿಸಲು ಮೀಸಲಿಡಬೇಕು ಎಂದು ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ. ಈ ಮಾತಿನ ಮೂಲಕ, ಅವರು ದೇಶಕ್ಕೆ ಯಾವ ಸಂದೇಶವನ್ನು ನೀಡಿದ್ದಾರೆ? ಮುಂದಿನ 25 ವರ್ಷಗಳು ಭಾರತೀಯರಿಗೆ ಇನ್ನಷ್ಟು ಭೀಕರವಾಗಿರಲಿದೆ ಎನ್ನುವ ಹೊರತಾಗಿ ಇನ್ನಾವ ಸಂದೇಶವೂ ಇದರಲ್ಲಿಲ್ಲ.

ಸ್ವಾತಂತ್ರೋತ್ತರ ಭಾರತದ 75 ವರ್ಷಗಳಲ್ಲಿ ಭಾರತ ಹಕ್ಕುಗಳಿಗಾಗಿ ಹೋರಾಟ ನಡೆಸುವ ಮೂಲಕ ದುರ್ಬಲವಾಗಿರುವುದಲ್ಲ, ಸಬಲವಾಗುತ್ತಾ ಬಂದಿರುವುದು ಎನ್ನುವ ಪ್ರಧಾನ ಅಂಶವನ್ನು ಪ್ರಧಾನಿ ಮೋದಿಯವರಿಗೆ ಯಾರಾದರೂ ಮನವರಿಕೆ ಮಾಡಿಕೊಡಬೇಕಾಗಿದೆ. ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡದೇ ಇದ್ದಿದ್ದರೆ, ಸ್ವಾತಂತ್ರ ಹೋರಾಟವೇ ನಡೆಯುತ್ತಿರಲಿಲ್ಲ. ಜನರು ಸಂಘಟಿತರಾಗಿ ಬ್ರಿಟಿಷರ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಪರಿಣಾಮವಾಗಿ ದೇಶಕ್ಕೆ ಸ್ವಾತಂತ್ರ ದೊರಕಿತು. ಸ್ವಾತಂತ್ರ ದೊರಕಿದ ಕಾಲದಲ್ಲಿ ಭಾರತದ ಸ್ಥಿತಿ ಹೇಗಿತ್ತು ಮತ್ತು 75 ವರ್ಷಗಳ ಬಳಿಕ ಭಾರತದ ಸ್ಥಿತಿ ಹೇಗಿದೆ ಎನ್ನುವುದು ಪ್ರಧಾನಿಯಾಗಿ ಅರಿತುಕೊಳ್ಳಬೇಕಾಗಿದೆ. ಜವಾಹರಲಾಲ್ ನೆಹರೂ ಅವರಿಂದ ಹಿಡಿದು, ಮನಮೋಹನ್ ಸಿಂಗ್‌ವರೆಗೆ ಯಾವ ಪ್ರಧಾನಿಗೂ ಈ ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳು ಅಭಿವೃದ್ಧಿಗೆ ಧಕ್ಕೆ ತರುತ್ತವೆ ಎಂದೆನಿಸಿರಲಿಲ್ಲ. ಮೂಲಭೂತ ಹಕ್ಕುಗಳನ್ನು ರಕ್ಷಿಸುವುದೇ ಉತ್ತಮ ಆಡಳಿತದ ಲಕ್ಷಣ ಎನ್ನುವುದನ್ನು ಅವರೆಲ್ಲ ಅರಿತುಕೊಂಡೇ ಆಡಳಿತ ನಡೆಸಿದರು. ಪ್ರಧಾನಿ ದಿವಂಗತ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ, ಭಾರತ ಅದಕ್ಕೆ ಹೇಗೆ ಸ್ಪಂದಿಸಿತು ಎನ್ನುವುದರ ಅರಿವೂ ಪ್ರಧಾನಿ ಮೋದಿಯವರಿಗೆ ಇದ್ದಂತಿಲ್ಲ. ಡಾ. ಅಂಬೇಡ್ಕರ್ ಅವರು ತನ್ನ ಜನರ ಹಕ್ಕುಗಳನ್ನು ಜಾಗೃತಗೊಳಿಸಿ ಮೇಲ್‌ಜಾತಿಯ ವಿರುದ್ಧ ದಲಿತರನ್ನು, ಶೋಷಿತರನ್ನು ಸಂಘಟಿಸಿದರು. ಹೋರಾಟಗಳ ಮೂಲಕವೇ ದಲಿತರು ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಂಡರು. ಜನಸಾಮಾನ್ಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾಗ ಮಾತ್ರ, ಸರಕಾರವೂ ಜಾಗರೂಕತೆಯಿಂದ ಆಡಳಿತ ನಡೆಸುತ್ತದೆ. ಇದೇ ಸಂದರ್ಭದಲ್ಲಿ ಈ ದೇಶದ ಜನತೆ, ತಮ್ಮ ಕರ್ತವ್ಯಗಳನ್ನು ಪಾಲಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಜನವಿರೋಧಿ ನೀತಿಗಳನ್ನು ಪ್ರಭುತ್ವ ಹೇರಲು ಹೊರಟಾಗ ಅದರ ವಿರುದ್ಧ ಒಂದಾಗಿ ಬೀದಿಗಿಳಿಯುವುದೂ ಜನರ ಕರ್ತವ್ಯಗಳಲ್ಲಿ ಒಂದು. ಬಹುಶಃ ಪ್ರಧಾನಿ ಮೋದಿಯವರಿಗೆ ಇದು ಗಂಟಲಿಗೆ ಸಿಕ್ಕಿದ ಮುಳ್ಳಾಗಿ ಕಾಡುತ್ತಿರಬೇಕು.

75 ವರ್ಷಗಳಲ್ಲಿ ಸಾಧನೆಯ ಏರುಗತಿಯಲ್ಲಿದ್ದ ಭಾರತ ಕಳೆದ ಏಳು ವರ್ಷಗಳಿಂದ ಯಾಕೆ ಹಿಂದಕ್ಕೆ ಚಲಿಸುತ್ತಿದೆ? 2014ರಿಂದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುವುದಕ್ಕೆ ಶುರು ಹಚ್ಚಿದರೆ? ಪ್ರಧಾನಿ ಮೋದಿ 75 ವರ್ಷಗಳ ಆಡಳಿತದ ಬಗ್ಗೆ ಮಾತನಾಡುವ ಬದಲು ತನ್ನ ಏಳು ವರ್ಷಗಳ ಆಡಳಿತದ ಬಗ್ಗೆ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನೋಟು ನಿಷೇಧದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂತಹದೇ ರೀತಿಯ ಮಾತುಗಳನ್ನಾಡಿದ್ದರು. ‘ಈಗ ತಡೆದುಕೊಂಡರೆ ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ’ ಎಂಬ ಭರವಸೆ ನೀಡಿದರು. ಆದರೆ ನೋಟು ನಿಷೇಧದಿಂದ ಕೆಲವೇ ಕೆಲವು ಮಂದಿ ಬಿಲಿಯಾಧಿಪತಿಗಳಾದರು. ಆದರೆ ಈ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತು. ನೋಟು ನಿಷೇಧದಿಂದ ಈ ದೇಶಕ್ಕೆ ಆರ್ಥಿಕವಾಗಿ ಎಷ್ಟು ಲಾಭವಾಯಿತು ಎನ್ನುವ ವಿವರವನ್ನು ಪ್ರಧಾನಿ ಮೋದಿಯವರು ಈವರೆಗೆ ಬಹಿರಂಗಪಡಿಸಿಲ್ಲ. ನೋಟು ನಿಷೇಧದ ದುಷ್ಪರಿಣಾಮವನ್ನು ಸರಿಪಡಿಸಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ‘ದೇಶಕ್ಕಾಗಿ ಸಹಿಸಿಕೊಳ್ಳಿ’ ಎಂದು ಮೋದಿ ಕೇಳಿದಾಗ, ಅದಕ್ಕೆ ತಲೆಬಾಗಿ ಜನರು ತಮ್ಮ ಕರ್ತವ್ಯವನ್ನು ನೆರವೇರಿಸಿದರು. ಇದೀಗ, ನೋಟು ನಿಷೇಧದಿಂದ ದೇಶಕ್ಕೆ ಎಷ್ಟು ಲಾಭವಾಯಿತು ಎಂದು ಕೇಳುವುದು ಜನರ ಹಕ್ಕು. ಆದರೆ ಮೋದಿಯವರು, ಹಾಗೆ ಕೇಳುವ ಹಕ್ಕು ನಿಮಗಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸುತ್ತಿದ್ದಾರೆ. ಸರಕಾರದ ವೈಫಲ್ಯದಿಂದ ಈ ದೇಶಕ್ಕೆ ಕೊರೋನ ಕಾಲಿಟ್ಟಿತ್ತು. ಇಡೀ ದೇಶವನ್ನೇ ಎರಡು ತಿಂಗಳಿಗೂ ಅಧಿಕ ಕಾಲ ಬಂದ್ ಮಾಡಲು ಘೋಷಿಸಿದರು. ಕೊರೋನವನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂದೂ ಘೋಷಿಸಿದರು. ಎಲ್ಲ ನಾಶ, ನಷ್ಟಗಳನ್ನು ದೇಶಕ್ಕಾಗಿ ಜನರು ಸಹಿಸಿ ತಮ್ಮ ಕರ್ತವ್ಯ ನಿಭಾಯಿಸಿದರು. ಈಗ, ಇನ್ನೂ ಕೊರೋನ ಯಾಕೆ ದೇಶದಿಂದ ತೊಲಗಿಲ್ಲ ಎಂದು ಪ್ರಧಾನಿಯನ್ನು ಕೇಳುವುದು ಜನರ ಹಕ್ಕು ಮತ್ತು ಉತ್ತರಿಸುವುದು ಪ್ರಧಾನಿಯ ಕರ್ತವ್ಯ. ಕೋಟ್ಯಂತರ ರೂಪಾಯಿಗಳನ್ನು ಲಸಿಕೆಗಾಗಿ ಚೆಲ್ಲಲಾಯಿತು. ಜನರ ಮೇಲೆ ಲಸಿಕೆಗಳನ್ನು ಪರೋಕ್ಷವಾಗಿ ಹೇರಲಾಯಿತು. ಕರ್ಫ್ಯೂ, ಲಾಕ್‌ಡೌನ್ ಬೆದರಿಕೆಗಳನ್ನು ಒಡ್ಡಿ ಲಸಿಕೆ ಪಡೆಯಲು ಬ್ಲಾಕ್‌ಮೇಲ್ ಮಾಡಲಾಯಿತು. ದೇಶವಾಸಿಗಳು ಲಸಿಕೆಗಳನ್ನು ಸ್ವೀಕರಿಸಿ ತಮ್ಮ ಕರ್ತವ್ಯ ನೆರವೇರಿಸಿದರು. ಆದರೆ ಇಂದಿಗೂ ಕೊರೋನ ಹೆಸರಲ್ಲಿ ಕರ್ಫ್ಯೂ ವಿಧಿಸಲಾಗುತ್ತಿದೆ. ಲಸಿಕೆ ಪಡೆದವರಲ್ಲೇ ಕೊರೋನ ಕಾಣಿಸಿಕೊಳ್ಳುತ್ತಿದೆ. ಇದನ್ನು ಪ್ರಶ್ನಿಸುವುದು ಜನರ ಮೂಲಭೂತ ಹಕ್ಕು.

ದೇಶದ ಜನರಿಗೆ ಕರ್ತವ್ಯಗಳನ್ನು ಬೋಧಿಸುವ ಮೊದಲು ಪ್ರಧಾನಿಯಾಗಿ ತನ್ನ ಕರ್ತವ್ಯವನ್ನು ಎಷ್ಟರ ಮಟ್ಟಿಗೆ ನಿರ್ವಹಿಸಿದ್ದಾರೆ ಎನ್ನುವುದರ ವಿವರಗಳನ್ನು ಮೋದಿಯವರು ಬಹಿರಂಗಪಡಿಸಬೇಕಾಗಿದೆ. ಜನರಿಂದ ಆಯ್ಕೆಯಾಗಿ ಜನವಿರೋಧಿ ನೀತಿಗಳನ್ನು ಹೇರುತ್ತಾ, ಅಂಬಾನಿ, ಅದಾನಿಗಳ ಪರವಾಗಿ ಕಾರ್ಯನಿರ್ವಹಿಸುವುದು ಪ್ರಧಾನಿ ಕರ್ತವ್ಯ ನಿರ್ವಹಿಸುವ ರೀತಿಯೇ? ಇಂತಹ ಜನವಿರೋಧಿ ನೀತಿಯನ್ನು ಪ್ರತಿರೋಧಿಸುವ ಮೂಲಕ, ಈ ದೇಶವನ್ನು ಜನರು ಉಳಿಸಿಕೊಳ್ಳಬೇಕಾಗಿದೆ. ಮೋದಿಯ ಭಾಷಣಕ್ಕೆ ಮರುಳಾಗಿ ತಮ್ಮ ಹಕ್ಕುಗಳನ್ನು ಮರೆತು, ನಿದ್ರಿಸಿದ ಕಾರಣಕ್ಕೆ ದೇಶ ಈ ಸ್ಥಿತಿಗೆ ಬಂದು ನಿಂತಿದೆ. ಮತ್ತೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗದೇ ಇದ್ದರೆ, ಮುಂದಿನ 25ವರ್ಷಗಳು ಭಾರತೀಯರ ಪಾಲಿಗೆ ಅಘೋಷಿತ ಲಾಕ್‌ಡೌನ್ ದಿನಗಳಾಗಿ ಪರಿವರ್ತನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News