ಶಿಕ್ಷಣ ಸಚಿವರು ಆರೆಸ್ಸೆಸ್ ಪದಾಧಿಕಾರಿಯಂತೆ ವರ್ತಿಸುವುದು ಅಪಾಯಕಾರಿ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2022-01-22 14:38 GMT

ಬೆಂಗಳೂರು, ಜ. 22: `ಉಡುಪಿಯ ಕಾಲೇಜೊಂದರ ಹಿಜಾಬ್(ಸ್ಕಾರ್ಫ್) ಪ್ರಕರಣವು ಇದೀಗ ಪ್ರಮುಖ ಚರ್ಚಾ ವಿಷಯವಾಗಿದೆ. ಮಕ್ಕಳ ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಸೌಲಭ್ಯಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಕುರಿತಂತೆ ಚರ್ಚೆ ಆಗಬೇಕಾದ ಸ್ಥಳದಲ್ಲಿ ಧಾರ್ಮಿಕ ವಸ್ತ್ರಗಳ ಕುರಿತಂತೆ ಚರ್ಚೆ ಆಗುತ್ತಿರುವುದು ಆತಂಕದ ಸಂಗತಿ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಸಂಬಂಧ ಟ್ವೀಟ್ ಮಾಡಿರುವ  ಅವರು, `ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರಿಯಾದ ತರಗತಿಗಳಿಲ್ಲದೆ ಸಹಜ ಶಿಕ್ಷಣದ ಅನುಭವ ಇಲ್ಲದೇ ಕಂಗಾಲಾಗಿದ್ದಾರೆ. ಹಾಗೆ ಕೂಲಂಕಷವಾಗಿ ಗಮನಿಸಿ ನೋಡಿದಾಗ ಈಗಲೂ ನಡೆಯುತ್ತಿರುವ ಆನ್‍ಲೈನ್ ತರಗತಿಗಳಿಂದ ಗ್ರಾಮೀಣ ಬಡ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಕಡಿಮೆ ಬೌದ್ಧಿಕ ಮಟ್ಟದ ತೊಂದರೆ ಎದುರಿಸುತ್ತಿರುವ ಅನುಕೂಲಸ್ಥ ಮಕ್ಕಳೂ ಸರಕಾರದ ಕೋವಿಡ್ ನಿರ್ವಹಣೆಯ ವೈಫಲ್ಯಕ್ಕೆ ಸಿಲುಕಿ, ಸರಿಯಾದ ಕ್ಲಾಸ್ ರೂಂ ಓರಿಯಂಟೇಶನ್ ಇಲ್ಲದೆ ಬೇಸರಗೊಂಡಿದ್ದಾರೆ' ಎಂದು ಗಮನ ಸೆಳೆದಿದ್ದಾರೆ.

`ಹೀಗಿರುವಾಗ ಮಕ್ಕಳ ಭವಿಷ್ಯಕ್ಕೆ ಮಾರಕವಾದ ಅವರ ಶೈಕ್ಷಣಿಕ ಆತಂಕಗಳನ್ನು ದೂರ ಮಾಡಬೇಕಾದ ಜವಾಬ್ದಾರಿ ಹೊಂದಿರುವ ಸರಕಾರವು ಕೇವಲ ಧಾರ್ಮಿಕ ವಸ್ತ್ರಗಳ ವಿಷಯದಲ್ಲಿ ರಾಜಕೀಯ ಮಾಡುತ್ತಾ ಕುಳಿತಿದೆ. ಇನ್ನು ಸಂವಿಧಾನಾತ್ಮಕವಾಗಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇದೆ. ಹೀಗಾಗಿ ಸಮಾಜದ ಭಾಗವಾಗಿರುವ ಶಾಲಾ ಆವರಣದಲ್ಲಿಯೂ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಇತ್ಯಾದಿ ಧರ್ಮಗಳ ಸಂಕೇತಗಳು ಸಹಜವಾಗಿಯೇ ಇವೆ. ಅದರ ಭಾಗವಾಗಿಯೇ ಧಾರ್ಮಿಕ ಆಚರಣೆಗಳೂ ನಡೆದಿವೆ. ಉದಾಹರಣೆಗೆ ಶಾಲಾ ಆವರಣದಲ್ಲಿ ಗಣೇಶ ಹಬ್ಬದ ಆಚರಣೆ, ಕ್ರಿಸ್‍ಮಸ್ ಕೇಕ್ ವಿತರಣೆ ಇತ್ಯಾದಿ' ಎಂದು ಹೇಳಿದ್ದಾರೆ.

ಜೊತೆಗೆ ಸಂವಿಧಾನದಲ್ಲೂ ಧಾರ್ಮಿಕ ಸೂಚಕ ವಸ್ತ್ರಗಳಿಗೆ ಶಾಲಾ ಆವರಣದಲ್ಲಿ ನಿರ್ಬಂಧ ಹೇರಲಾಗಿಲ್ಲ. ಹೀಗಿರುವಾಗ ಶಿಕ್ಷಣ ಸಚಿವರು ತಮ್ಮ ಸಚಿವ ಸ್ಥಾನದ ಜವಾಬ್ದಾರಿಯನ್ನು ಮರೆತು ಆರೆಸೆಸ್ಸ್ ಪದಾಧಿಕಾರಿಯಂತೆ ವರ್ತಿಸುವುದು ಅಪಾಯಕಾರಿ ಬೆಳವಣಿಗೆ ಆಗಿದೆ. ಇದಕ್ಕಿಂತ ಅಪಾಯಕಾರಿ ಬೆಳವಣಿಗೆ ಎಂದರೆ ವಿದ್ಯಾರ್ಥಿಗಳು ಶಾಲಾ ಶೈಕ್ಷಣಿಕ ಆವರಣದಲ್ಲಿ ಈಗಿಂದಲೇ ಹಿಂದೂ-ಮುಸ್ಲಿಂ ಎಂಬ ಭೇದದಿಂದ ವರ್ತಿಸುತ್ತಿರುವುದು. ಅದರಲ್ಲೂ ಸಹಜ ಧಾರ್ಮಿಕತೆಗೆ ಎದುರು ವಿದ್ಯಾರ್ಥಿಗಳು ಸ್ಪರ್ಧೆ ಮತ್ತು ಅಸಹನೆಯ ಭಾವನೆಯಿಂದಲೇ ಕೇಸರಿ ಶಾಲು ಧರಿಸಿ ಬರುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಅದರಲ್ಲೂ ಶಿಕ್ಷಣ ಸಚಿವರೇ ಇಂತಹ ಅನುಚಿತ ವರ್ತನೆಗಳನ್ನು ಪೋಷಿಸುವುದನ್ನು ಕಂಡರೆ ಮಕ್ಕಳ ಶೈಕ್ಷಣಿಕ ಭವಿಷ್ಯ ಏನಾಗುವುದೋ ಎಂಬ ಆತಂಕ ನನ್ನದು' ಎಂದು ಮಹದೇವಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News