ಬೋಧಕೇತರ ಸಿಬ್ಬಂದಿಯ ಸೇವೆ ಖಾಯಂ: ಹೈಕೋರ್ಟ್

Update: 2022-01-22 15:06 GMT

ಬೆಂಗಳೂರು, ಜ.22: 13 ಬೋಧಕೇತರ ಸಿಬ್ಬಂದಿಯ ಸೇವೆ ಖಾಯಂಗೊಳಿಸಲು ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.

10 ವರ್ಷಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದ 13 ಬೋಧಕೇತರ ಸಿಬ್ಬಂದಿಯ ಸೇವೆ ಖಾಯಂಗೊಳಿಸಲು ನಿರಾಕರಿಸಿ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಎತ್ತಿ ಹಿಡಿದಿರುವ ವಿಭಾಗೀಯ ಪೀಠ, ಸಿಬ್ಬಂದಿಯ ಸೇವೆ ಖಾಯಂಗೊಳಿಸುವ ಮನವಿ ಪರಿಗಣಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.

ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಹಿರಿಯ ನ್ಯಾಯಮೂರ್ತಿ ಎಸ್.ಸುಜಾತ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗಲೆಂದು ಎಸ್.ಜಿ ನಾಗೇಂದ್ರ ಸೇರಿ 13 ಸಿಬ್ಬಂದಿಯನ್ನು ತಾತ್ಕಾಲಿಕ ಆಧಾರದ ಮೇಲೆ ವಿಶ್ವವಿದ್ಯಾಲಯ ನೇಮಿಸಿತ್ತು. ಈ ಸಿಬ್ಬಂದಿ 10 ವರ್ಷಕ್ಕೂ ಹೆಚ್ಚು ಕಾಲ ದುಡಿಸಿಕೊಂಡಿದೆ.

ಇದೀಗ ಅವರ ಸೇವೆ ಖಾಯಂಗೊಳಿಸಲು ಮಾತ್ರ ನಿರಾಕರಿಸಿದೆ. ಇದು ಸಮರ್ಥನೀಯವಲ್ಲ. ಹಾಗಾಗಿ, ಈ 13 ಮಂದಿ ಸಿಬ್ಬಂದಿಯ ಪ್ರಕರಣಗಳನ್ನು ಉಮಾದೇವಿ ಪ್ರಕರಣದಲ್ಲಿ ಹೈಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನನ್ವಯ ಪರಿಗಣಿಸಬೇಕು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News