ಕೋವಿಡ್ ಸೋಂಕು ಶೀಘ್ರದಲ್ಲೇ ಇಳಿಕೆ ಸಾಧ್ಯತೆ: ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ

Update: 2022-01-23 12:38 GMT
ಸಚಿವ ಡಾ.ಕೆ.ಸುಧಾಕರ್ 

ಬೆಂಗಳೂರು, ಜ. 23: `ರಾಜ್ಯದಲ್ಲಿ ಎರಡು ದಿನಗಳಿಂದ ಕೊರೋನ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಆದಷ್ಟು ಶೀಘ್ರವಾಗಿ ಸೋಂಕಿನ ಏರಿಕೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ತಜ್ಞರ ಪ್ರಕಾರ ಇನ್ನೂ 2 ಅಥವಾ 3 ವಾರಗಳ ನಂತರ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರು ಇದೇ ರೀತಿ ಸಹಕಾರ ಕೊಟ್ಟರೆ ಆದಷ್ಟು ಶೀಘ್ರವಾಗಿ ಸೋಂಕು ಕಡಿಮೆಯಾಗಲಿದೆ. ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಸರಕಾರ ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ' ಎಂದು ಎಚ್ಚರಿಸಿದರು.

`ಜನರಿಗೆ ತೊಂದರೆಯಾಗಬಾರದೆಂಬ ಏಕೈಕ ಉದ್ದೇಶಕ್ಕಾಗಿ ವಾರಾಂತ್ಯದ ಕಫ್ರ್ಯೂವನ್ನು ಹಿಂಪಡೆಯಲಾಗಿದೆ. ಜನರು ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಸೋಂಕಿನ ಕಾರಣದಿಂದ ಅದರ ತೀವ್ರತೆ ಹೆಚ್ಚಾದರೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಜನರಿಗಾಗಿ ಸರಕಾರ ಉತ್ತಮವಾದ ನಿರ್ಧಾರ ತೆಗೆದುಕೊಂಡಿದೆ' ಎಂದು ಅವರು ಸಮರ್ಥನೆ ಮಾಡಿದರು.

`ಕೇವಲ ಕಾನೂನಿನಿಂದ ಮಾತ್ರವೇ ಸೋಂಕನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಜನರ ಸಹಕಾರವೂ ಮುಖ್ಯ. ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದರೆ ಸಾರ್ವಜನಿಕರು ಸಹಕಾರ ಕೊಡಬೇಕು. ಸಿಎಂ ಅವರು ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ತಜ್ಞರು, ಸಚಿವರು, ಇಲಾಖೆ ಅಧಿಕಾರಿಗಳ ಜತೆ ಸಾಕಷ್ಟು ಚರ್ಚಿಸಿ ಅಂತಿಮವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಜನರಿಗೆ ಜವಾಬ್ದಾರಿಯನ್ನು ನೀಡಿದ್ದೇವೆ. ಅದನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತಾರೆ ನೋಡಬೇಕು' ಎಂದು ಅವರು ತಿಳಿಸಿದರು.

ಅಂತಹ ಸ್ಥಿತಿ ಇನ್ನೂ ಬಂದಿಲ್ಲ: `ರಾಜ್ಯದಲ್ಲಿ ರಾತ್ರಿ (ನೈಟ್) ಕರ್ಫ್ಯೂ ಮತ್ತು ಶೇ.50ಃ50ರಷ್ಟು ನಿಯಮವನ್ನು ರದ್ದು ಮಾಡುವಂತಹ ಸ್ಥಿತಿ ಇನ್ನೂ ಇಲ್ಲ. ರಾತ್ರಿ ಕರ್ಫ್ಯೂ  ಸೇರಿದಂತೆ ಎಲ್ಲ ನಿಯಮ ರದ್ದು ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಲಿ ಎಂಬುದು ನಮ್ಮ ಹಂಬಲ. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ' ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಇದೇ ವೇಳೆ ಸ್ಪಷ್ಟಣೆ ನೀಡಿದರು.

`ಬೆಂಗಳೂರಿನಲ್ಲಿ ಜ.19 ರಂದು ಸೋಂಕು ಗರಿಷ್ಠ ಮಟ್ಟ ತಲುಪಿತ್ತು. ನಂತರ ಇಳಿಮುಖವಾಗುತ್ತಿದೆ. ಇನ್ನು ಮೂರು-ನಾಲ್ಕು ದಿನ ಇಳಿಕೆಯಾದರೆ ಸೋಂಕು ಇಳಿಕೆಯತ್ತ ಸಾಗಿದೆ ಎಂದು ಅಂದಾಜಿಸಬಹುದು. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.24, 25ರಷ್ಟು ಇದ್ದದ್ದು ಈಗ ಶೇ.17-18ರಷ್ಟು ಪಾಸಿಟಿವಿಟಿ ದರ ಬರುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಳಕ್ಕೆ ನಗರ ಪ್ರದೇಶದಿಂದ ಹೋದವರಷ್ಟೇ ಅಲ್ಲ, ನಾವು ಐದಾರು ಜಿಲ್ಲೆಗಳ ಗಡಿ ಹಂಚಿಕೊಂಡಿದ್ದೇವೆ. ಅಲ್ಲಿಂದಲೂ ಜನರ ಓಡಾಟ ಇದ್ದೇ ಇರುತ್ತದೆ. ಇದೆಲ್ಲಾ ಸ್ವಾಭಾವಿಕ'

-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News