ಸ್ವಾರ್ಥ ಸಾಧನೆಗಾಗಿ ಪೂಜಾರಿಯವರಿಗೆ ಕೈಕೊಟ್ಟ 'ಒಳ ಸಂಘಿ' ಹರಿಕೃಷ್ಣ ಬಂಟ್ವಾಳರಿಂದ ಈಗ ಅಪಪ್ರಚಾರ:ದಿನೇಶ್ ಅಮಿನ್ ಮಟ್ಟು

Update: 2022-01-24 09:26 GMT
ದಿನೇಶ್ ಅಮೀನ್ ಮಟ್ಟು-ಹರಿಕೃಷ್ಣ ಬಂಟ್ವಾಳ

ಸ್ವಾರ್ಥ ಸಾಧನೆಗಾಗಿ ಜನಾರ್ದನ ಪೂಜಾರಿಯವರಿಗೆ ಕೈಕೊಟ್ಟು ತಾನು ಎಲ್ಲಿಗೆ ಸಲ್ಲಬೇಕೋ ಅಲ್ಲಿಗೆ ಹೋಗಿ ಬಿಜೆಪಿಯಲಿ ಲೀನವಾದರು ಎಂದು ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ ವಿರುದ್ಧ ದಿನೇಶ್ ಅಮೀನ್ ಮಟ್ಟು ವಾಗ್ದಾಳಿ ನಡೆಸಿದ್ದಾರೆ.


ಅಮೀನ್ ಮಟ್ಟು ಸೋಮವಾರ ಹಾಕಿದ ಫೇಸ್ ಬುಕ್ ಪೋಸ್ಟ್ ಇಲ್ಲಿದೆ

"ಜನಾರ್ದನ ಪೂಜಾರಿಯವರು ಕುದ್ರೋಳಿಯಲ್ಲಿ ನಾರಾಯಣ ಗುರುಗಳಿಗೆ ಸಮಾಧಿ ಕಟ್ಟಿದ್ದಾರೆ" ಎಂದು ನಾನು ಹೇಳಿದ್ದೆನೆಂದು ಆಗಾಗ ತಮ್ಮ ಬಾಯಿ ಬಡುಕತನದಿಂದಲೇ ಸುದ್ದಿಯಾಗುತ್ತಿರುವ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ ಅವರು ಆರೋಪಿಸಿದ್ದಾರೆ. ಮೊದಲನೆಯದಾಗಿ ಗೋರಿ-ಸಮಾಧಿಗಳನ್ನು ತುಚ್ಚೀಕರಿಸುವುದೇ ಹಿಂದೂ ವಿರೋಧಿಯಾಗಿದೆ. ಹಿಂದೂ ಧರ್ಮದ ಬಹುತೇಕ ದೇವಸ್ಥಾನಗಳು ಮುಖ್ಯವಾಗಿ ಕರಾವಳಿಯ ದೈವಸ್ಥಾನಗಳು ನಾವು ಆರಾಧಿಸುವ ದೈವ-ದೇವರುಗಳ ಸಮಾಧಿಯೇ ಆಗಿರುತ್ತದೆ.

ಸಮಾಧಿಯನ್ನು ಅಗೌರವವೆಂದು ಹೇಳುತ್ತಿರುವ ಹರಿಕೃಷ್ಣ ಬಂಟ್ವಾಳ್, ಕೇರಳದ ಶಿವಗಿರಿಯಲ್ಲಿರುವ ನಾರಾಯಣ ಗುರುಗಳ ಸಮಾಧಿ ಬಗ್ಗೆ ತಮ್ಮ ಅಭಿಪ್ರಾಯ ಏನು‌‌‌ ಎಂಬುದನ್ನು ಸ್ಪಷ್ಟಪಡಿಸಬೇಕು.

ಅದೇ ರೀತಿ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ತಿರಸ್ಕರಿಸಿದ ಬಿಜೆಪಿ ನಿರ್ಧಾರವನ್ನು ವಿರೋಧಿಸಿ ಗುರುಗಳ ಪೋಟೊವನ್ನು ತಲೆ‌ಮೇಲೆ ಹೊತ್ತುಕೊಂಡು ಕುದ್ರೋಳಿ ದೇವಸ್ಥಾನಕ್ಕೆ‌ ಮೆರವಣಿಗೆ ಹೊರಡಲಿರುವ ಬಿ.ಜನಾರ್ಧನ ಪೂಜಾರಿಯರನ್ನು ವಿರೋಧಿಸುವ, ಖಂಡಿಸುವ ಧೈರ್ಯ ಮತ್ತು ತಮ್ಮ ಪಕ್ಷ ನಿಷ್ಠೆಯನ್ನು ಹರಿಕೃಷ್ಣ ಬಂಟ್ವಾಳ್ ಪ್ರದರ್ಶಿಸಬೇಕು.

ನಾನು ಸಾರ್ವಜನಿಕವಾಗಿ ಆಡಿದ್ದ ಯಾವ ಮಾತುಗಳನ್ನು ನಿರಾಕರಿಸಲು ಹೋಗುವುದಿಲ್ಲ. ಆದರೆ ನನ್ನಮಾತುಗಳನ್ನು ತಿರುಚಿ ಮಾಡಿರುವ ವರದಿಗಳಿಗೆ ಕಾಲಕಾಲಕ್ಕೆ ಸ್ಪಷ್ಟೀಕರಣ ನೀಡುತ್ತಾ ಬಂದಿದ್ದೇನೆ.

ವರ್ಣಾಶ್ರಮ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯಾಗಿ ನಾರಾಯಣ ಗುರುಗಳು ಕುದ್ರೋಳಿಯಲ್ಲಿ ಸ್ಥಾಪಿಸಿದ್ದ ದೇವಸ್ಥಾನದ ಜೀರ್ಣೋದ್ದಾರ ಮಾಡಿ ನಿರ್ಮಿಸಿದ್ದ ನವೀಕೃತ ದೇವಸ್ಥಾನವನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಈಗಲೂ ಪ್ರತಿಪಾದಿಸುತ್ತಿರುವ ಶೃಂಗೇರಿ ಸ್ವಾಮೀಜಿಗಳಿಂದ ಉದ್ಘಾಟನೆ ಮಾಡಿಸುವ ಮೂಲಕ ನಾರಾಯಣ ಗುರುಗಳ ಚಿಂತನೆಯ ಸಮಾಧಿ ಮಾಡಲಾಗುತ್ತಿದೆ’’ ಎಂದು ಹೇಳಿರುವುದು ನಿಜ,ನಿಜ,ನಿಜ. ಈ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ, ಇದಕ್ಕಾಗಿ ಯಾರಾದರೂ ನನ್ನನ್ನು ಗಲ್ಲಿಗೇರಿಸುವುದಿದ್ದರೆ ಕೊರಳೊಡ್ಡಲು ತಯಾರಿದ್ದೇನೆ.

ಈ ಅಭಿಪ್ರಾಯವನ್ನು ನಾನು ಮೊದಲ ಬಾರಿ ವ್ಯಕ್ತಪಡಿಸಿದ್ದು ಸರಿಯಾಗಿ 30 ವರ್ಷಗಳ ಹಿಂದೆ. ಅನೇಕಾನೇಕ ಸ್ವಾಮೀಜಿಗಳು ಒಂದು ಪಕ್ಷದ ರಾಜಕೀಯ ವಕ್ತಾರರಂತೆ ಮಾತನಾಡುತ್ತಿರುವಾಗಲೂ ಶೃಂಗೇರಿ ಸ್ವಾಮೀಜಿಗಳು ಪಕ್ಷಾತೀತವಾಗಿ ಉಳಿದವರು.

ಆ ನಿಲುವನ್ನು ಅವರು ಈಗಲೂ ಉಳಿಸಿಕೊಂಡು ಹೋಗಿದ್ದಾರೆ. ಈ ಕಾರಣಕ್ಕಾಗಿ ಶೃಂಗೇರಿ ಸ್ವಾಮೀಜಿಗಳ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ ಅವರ ಜೊತೆ ನನಗೆ ಸೈದ್ದಾಂತಿಕವಾದ ವಿರೋಧವಿದೆ ಎನ್ನುವುದನ್ನು ಆಗಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಶೃಂಗೇರಿ ಸ್ವಾಮೀಜಿಗಳನ್ನು ಅತಿಥಿಗಳಾಗಿ ಬೇಕಿದ್ದರೆ ಕರೆದು ಗೌರವಿಸಿ.

ಆದರೆ ನವೀಕೃತ‌ ಕುದ್ರೋಳಿ ದೇವಾಲಯವನ್ನು ಅವರದ ಉದ್ಘಾಟನೆ ಮಾಡಿಸಬೇಡಿ. ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿ ಕಟ್ಟಿದ ದೇವಸ್ಥಾನವನ್ನು ವರ್ಣಾಶ್ರಮ ವ್ಯವಸ್ಥೆಯ ಸಮರ್ಥಕ ಸ್ವಾಮೀಜಿಗಳಿಂದ ಉದ್ಘಾಟನೆ ಮಾಡಿಸುವ ಮೂಲಕ ನೀವು ನಾರಾಯಣ ಗುರುಗಳ ಚಿಂತನೆಯನ್ನು ಸಮಾಧಿ ಮಾಡುತ್ತಿದ್ದೀರಿ ಎಂದು ಆಗಿನ ಎಲ್ಲ ಬಿಲ್ಲವ ನಾಯಕರಿಗೆ ಪತ್ರ ಬರೆದು ಮನವಿ ಮಾಡಿದ್ದೆ.

ಗೋಕರ್ಣನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮುಂಬೈ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ದಿವಂಗತ ಜಯ ಸಿ.ಸುವರ್ಣರಿಗೆ ಅಸೋಷಿಯೇಷನ್ ನ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ರವಿ.ರಾ.ಅಂಚನ್ ಮತ್ತು ನಾನು ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಿದ್ದೆವು.

ಆದರೆ ಯಾವಾಗ ನವೀಕೃತ ದೇವಾಲಯವನ್ನು ಶೃಂಗೇರಿಯ ಸ್ವಾಮೀಜಿಗಳಿಂದ ಉದ್ಘಾಟನೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತೋ, ಆಗ ನಾನು ಅದನ್ನು ಬಲವಾಗಿ ವಿರೋಧಿಸಿದ್ದೆ. ಇದು ಯಾಕೆ ತಪ್ಪು ನಿರ್ಧಾರ ಎನ್ನುವುದನ್ನು ಜಯ ಸುವರ್ಣರಿಗೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆ.

ಈ ವಿಷಯದ ಮೇಲೆ ನನ್ನ ಮತ್ತು ಸುವರ್ಣರ ನಡುವೆ ಗಂಟೆಗಟ್ಟಲೆ ಬೆಂಗಳೂರಿನ ಹೊಟೇಲ್ ನಲ್ಲಿ ವಾಗ್ವಾದ ನಡೆದಿತ್ತು. ಕೊನೆಗೆ ನಾನು ‘’ ನಾರಾಯಣ ಗುರುಗಳ ಚಿಂತನೆಯನ್ನು ನಾನು ಒಪ್ಪುತ್ತೇನೆ ಎಂದು ಶೃಂಗೇರಿ ಸ್ವಾಮೀಜಿಗಳಿಂದ ಬಹಿರಂಗ ಸಭೆಯಲ್ಲಿ ಹೇಳಿಸಿ, ನಾನು ಅವರ ಕಾಲಿಗೆ ಬೀಳುತ್ತೇನೆ’’ ಎಂದು ಹೇಳಿದ್ದೆ.

ಸುವರ್ಣರು ‘ಅದೇನು ದೊಡ್ಡ ಮಾತಲ್ಲ, ಹೇಳಿಸುವ' ಎಂದಿದ್ದರು. ಅಮಾಯಕರಾಗಿದ್ದ ಸುವರ್ಣರನ್ನು ವಿವಾದಕ್ಕೆ ಸಿಲುಕಿಸುವುದು ನನಗೆ ಬೇಡವಾಗಿದ್ದ ಕಾರಣ ಅದು ಯಾಕೆ ಸಾಧ್ಯವಿಲ್ಲ ಎಂದು ವಿವರಿಸಿದ್ದೆ.

ನಾರಾಯಣ ಗುರುಗಳ ಚಿಂತನೆಯನ್ನು ಒಪ್ಪಿದರೆ ಅವರು ತಮ್ಮ ಮಠದಲ್ಲಿ ಬ್ರಾಹ್ಮಣೇತರರನ್ನು ಅರ್ಚಕರಾಗಿ ನೇಮಿಸಬೇಕಾಗುತ್ತದೆ, ಆ ಕಾರಣದಿಂದಾಗಿ ಅವರು ಹಾಗೆ ಘೋಷಿಸಲು ಒಪ್ಪುವುದಿಲ್ಲ “’ ಎಂದು ಅವರಿಗೆ ತಿಳಿಸಿ ಸುಮ್ಮನಾಗಿಸಿದ್ದೆ.

ಆಗಷ್ಟೇ ಪತ್ರಕರ್ತನಾಗಿ ಕಣ್ಣುಬಿಡುತ್ತಿದ್ದ ನನ್ನ ಮಾತುಗಳನ್ನು ಕೇಳುವವರು ಯಾರೂ ಇರಲಿಲ್ಲ. ಕೊನೆಗೆ ಬಿಲ್ಲವ ಸಮಾಜದ ಸುಮಾರು 25 ನಾಯಕರಿಗೆ ನನ್ನ ನಿಲುವನ್ನು ಪ್ರತಿಪಾದಿಸಿ ಪತ್ರ ಬರೆದಿದ್ದೆ ( ಸದ್ಯ ಆ ಪತ್ರ ನನ್ನ ಕೈಯಲ್ಲಿಲ್ಲ, ಮುಂದಿನ ದಿನಗಳಲ್ಲಿ ಅದನ್ನು ಹಾಕುತ್ತೇನೆ). ನನ್ನನ್ನು ಈಗ ನೋಡುತ್ತಿರುವವರಿಗೆ 30 ವರ್ಷದ ಪ್ರಾಯದಲ್ಲಿ ನಾನು ಹೇಗಿರಬಹುದೆಂದು ಊಹಿಸಿಕೊಳ್ಳಬಹುದು. ಕೊನೆಗೆ ನೀವು ನನ್ನ ಮಾತನ್ನು ಒಪ್ಪದಿದ್ದರೆ ಮಂಗಳೂರಿನ ಪುರಭವನದ ಎದುರುಗಡೆ ಅಮರಣಾಂತ ಉಪವಾಸ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದೆ.

ಇದರ ನಂತರ ಬೆಂಗಳೂರಿಗೆ ಬಂದಿದ್ದ ಜಯ ಸುವರ್ಣರು ಇಂತಹ ಅತಿರೇಕ ಮಾಡಲು ಹೋಗಬೇಡಿ ಎಂದು ಬುದ್ದಿ ಹೇಳಲು ಪ್ರಯತ್ನ ಪಟ್ಟರು. ಶೃಂಗೇರಿ ಸ್ವಾಮೀಜಿಗಳನ್ನು ಕರೆಯಲು ನಿರ್ಧರಿಸಿಯಾಗಿದೆ, ಅದನ್ನು ಬದಲಾಯಿಸಿಕೊಳ್ಳಲು ಆಗುವುದಿಲ್ಲ. ಬೇರೆ ಪರಿಹಾರ ಸೂಚಿಸಿ ಎಂದು ಹೇಳಿದರು. ನಾನು ‘’ ನಾರಾಯಣ ಗುರುಗಳು ಶಿಕ್ಷಣಕ್ಕೆ ಮಹತ್ವ ಕೊಟ್ಟ ಧಾರ್ಮಿಕ ಸುಧಾರಕ. ಮಂಗಳೂರಿನಲ್ಲಿ ಬಿಲ್ಲವರ ವಿದ್ಯಾರ್ಥಿಗಳಿಗಾಗಿ ಮತ್ತು ಬಿಲ್ಲವ ಮಹಿಳಾ ಉದ್ಯೋಗಿಗಳಿಗಾಗಿ ಒಂದು ಹಾಸ್ಟೆಲ್ ಕಟ್ಟಿಸಿ ಎಂದು ಹೇಳಿದ್ದೆ. ಅದೇನು ದೊಡ್ಡ ಕೆಲಸನಾ ಮಾಡಿ ಬಿಡುವ ಎಂದು ಹೇಳಿದ್ದರು. ಅವರಿಂದಲೂ ಆ ಭರವಸೆ ಈಡೇರಿಸಲಾಗಲಿಲ್ಲ.

ನವೀಕೃತ ಕುದ್ರೋಳಿ ದೇವಸ್ಥಾನದ ಉದ್ಘಾಟನೆಯ ದಿನ ನನಗಿನ್ನೂ ಸರಿಯಾಗಿ ನೆನಪಿದೆ. ಆ ಸಮಾರಂಭಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆಗಮಿಸಿದ್ದರು. ಆ ದಿನ ಅವರಿಗೆ ದೇವಸ್ಥಾನದೊಳಗೆ ಯಾವ ವಿಶೇಷ ಭದ್ರತೆಗಳಿರಲಿಲ್ಲವಾದ ಕಾರಣ ನಾವೆಲ್ಲ ಅವರ ಹಿಂದೆಯೇ ಇದ್ದೆವು. ಅಂಗಣ ಪ್ರವೇಶಿಸಿದ ಕೂಡಲೇ ರಾಜೀವ್ ಗಾಂಧಿಯವರು 'ವೇರ್ ಈಸ್ ನಾರಾಯಣ ಗುರು ಸ್ಟಾಚ್ಯು? ಎಂದು ಕೇಳಿದರು.

ಪಕ್ಕದಲ್ಲಿದ್ದವರು ವೇದಿಕೆಯ ಬಲಭಾಗದ ಕಡೆ ಕೈಮಾಡಿದರು. ತಕ್ಷಣ ಆ ಕಡೆ ತಿರುಗಿದ ರಾಜೀವ್ ಗಾಂಧಿ ಬಿರಬಿರನೆ ಹೋಗಿ ತಲೆ ತಗ್ಗಿಸಿ ಕೈಮುಗಿದು ಬಂದರು. ಅವರ ಜೊತೆಯಲ್ಲಿಯೇ ಇದ್ದ ಶೃಂಗೇರಿ ಸ್ವಾಮೀಜಿಗಳು ಆ ಕಡೆ ತಿರುಗಿಯೂ ನೋಡದೆ ನೇರವಾಗಿ ವೇದಿಕೆ ಕಡೆಹೋದರು. ಆ ಸಮಾರಂಭದಲ್ಲಿಯೂ ಸ್ವಾಮೀಜಿಗಳು ನಾರಾಯಣ ಗುರುಗಳ ಚಿಂತನೆಯ ಬಗ್ಗೆ ಮಾತನಾಡಿರಲಿಲ್ಲ.

ಇವೆಲ್ಲವನ್ನೂ ಗಮನಿಸಿದ್ದ ಜಯ ಸುವರ್ಣರ ಮುಖದಲ್ಲಿ ಅಚ್ಚರಿ ಇತ್ತು. ಅದರ ನಂತರ ಸುವರ್ಣರು,ರವಿ ಮತ್ತು ನನ್ನ ನಡುವೆ ಸುದೀರ್ಘ ಚರ್ಚೆ ನಡೆದಿತ್ತು. ಅವರಿಬ್ಬರೂ ಈಗ ನಮ್ಮ ನಡುವೆ ಇಲ್ಲದಿರುವ‌ ಕಾರಣ ಚರ್ಚೆಯ ವಿವರವನ್ನು ಹೇಳುವುದು ಸರಿಯಾಗಲಾರದು. ಆದರೆ ನನ್ನ ಆಕ್ಷೇಪವನ್ನು ಸುವರ್ಣರು ಅರ್ಥಮಾಡಿಕೊಂಡಿದ್ದರು ಎಂದಷ್ಟೇ ಹೇಳಬಲ್ಲೆ.

ಕೊನೆಯದಾಗಿ ಹರಿಕೃಷ್ಣ ಬಂಟ್ವಾಳ ಎಂಬ ದೊಡ್ಡ ಬಾಯಿ ಬಗ್ಗೆ ಎರಡು ಮಾತು ಹೇಳಬೇಕು.
ಬಿಲ್ಲವ ಸಮಾಜದ ಮಾತ್ರವಲ್ಲ ಇಡೀ ಜನಸಮುದಾಯದ ಜನಪ್ರಿಯ ನಾಯಕರಾಗಿ ಬೆಳೆಯುತ್ತಿದ್ದ ಕಳಂಕರಹಿತ ಪ್ರಾಮಾಣಿಕ ಮತ್ತು ಅಪ್ಪಟ ಜಾತ್ಯತೀತರಾದ ಬಿ.ಜನಾರ್ದನ ಪೂಜಾರಿಯವರ ಹಾದಿ ತಪ್ಪಿಸಿ ಅವರನ್ನು ಆಗಾಗ ಅನಗತ್ಯ ವಿವಾದಕ್ಕೆ ಸಿಲುಕುವಂತೆ ಮಾಡಿದ್ದು ಇದೇ ಹರಿಕೃಷ್ಣ ಬಂಟ್ವಾಳ.

ಧರ್ಮಸ್ಥಳದ ವೀರೇಂದ್ರ ಹೆಗಡೆ ಮತ್ತು ಜನಾರ್ಧನ ಪೂಜಾರಿ ಅವರ ನಡುವಿನ ದಶಕಗಳ ಕಾಲದ ಸಂಘರ್ಷಕ್ಕೆ ಈ ಹರಿಕೃಷ್ಣ ಬಂಟ್ವಾಳರೇ ಕಾರಣ. ಇದೊಂದು ಸೈದ್ಧಾಂತಿಕ ಸಂಘರ್ಷವಾಗಿದ್ದರೆ ಸಮರ್ಥನೆಯಾದರೂ ಇರುತ್ತಿತ್ತು. ಆದರೆ ಹರಿಕೃಷ್ಣ ಅದನ್ನೊಂದು ವೈಯಕ್ತಿಕ ಜಗಳವಾಗುವಂತೆ ಮಾಡಿದ್ದರು.

ಹಿಂದುಳಿದ ಸಮುದಾಯದ ಶಕ್ತಿ ಕೇಂದ್ರವಾಗಬೇಕಾಗಿದ್ದ ಕುದ್ರೋಳಿ ಕ್ಷೇತ್ರವನ್ನು ಜನಾರ್ಧನ ಪೂಜಾರಿಯವರ ಕಿವಿ ಊದಿ ವೈದಿಕಾಚರಣೆಗಳ ವೈಭವೀಕರಣದ ಮೂಲಕ ಬ್ರಾಹ್ಮಣೀಕರಿಸಲು ಇದೇ ಹರಿಕೃಷ್ಣರಂತಹ “ಒಳ ಸಂಘಿ’’ಗಳು ಕಾರಣ.
ರಮಾನಾಥ್ ರೈಯವರನ್ನೊಳಗೊಂಡಂತೆ ಜನಾರ್ಧನ ಪೂಜಾರಿಯವರಿಗೆ ದಶಕಗಳ ಕಾಲ ನಿಷ್ಠರಾಗಿ ಅವರ ಜೊತೆಗಿದ್ದ ಕಾಂಗ್ರೆಸ್ ನಾಯಕರನ್ನು ಅವರಿಂದ ದೂರ ಮಾಡಿದವರು ಈ ಹರಿಕೃಷ್ಣಬಂಟ್ವಾಳ.

ಆರ್ ಎಸ್ ಎಸ್ ನಿಂದ ಬಂದಿದ್ದ ಹರಿಕೃಷ್ಣ ಬಂಟ್ವಾಳ್ ಕೋಮುವಾದಿ ಕಲ್ಲಡ್ಕದ ಭಟ್ರು ಮತ್ತು ಅಪ್ಪಟ ಜಾತ್ಯತೀತರಾಧ ಪೂಜಾರಿಯವರ ನಡುವೆ ಸ್ನೇಹದ ಬೆಸುಗೆ ಬೆಸೆದು ಕಾಂಗ್ರೆಸ್ ಪಕ್ಷವೇ ಮುಜುಗರ ಪಡುವಂತೆ ಮಾಡಿದ್ದರು.
ಕೊನೆಗೆ ತನ್ನ ಸ್ವಾರ್ಥ ಸಾಧನೆಗಾಗಿ ಪೂಜಾರಿಯವರಿಗೆ ಕೈಕೊಟ್ಟು ತಾನು ಎಲ್ಲಿಗೆ ಸಲ್ಲಬೇಕೋ ಅಲ್ಲಿಗೆ ಹೋಗಿ ಬಿಜೆಪಿಯಲಿ ಲೀನವಾದರು.

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿರುವ ಬಿಜೆಪಿ ನಿರ್ಧಾರವನ್ನು ವಿರೋಧಿಸುತ್ತಿರುವುದು ಕೇವಲ ಕಾಂಗ್ರೆಸ್ ಇಲ್ಲವೇ ಕಮ್ಯುನಿಸ್ಟರು ಮಾತ್ರವಲ್ಲ ಎಲ್ಲ ಜಾತಿ,ಧರ್ಮ ಮತ್ತು ಪಕ್ಷಗಳಲ್ಲಿರುವ ನಾರಾಯಣ ಗುರುಗಳ ಅನುಯಾಯಿಗಳೂ ವಿರೋಧಿಸುತ್ತಿದ್ದಾರೆ.

ಈ ಬಗ್ಗೆ ಹರಿಕೃಷ್ಣ ಬಂಟ್ವಾಳರ ಅಭಿಪ್ರಾಯ ಏನೆಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಆ ಧೈರ್ಯ ಅವರಿಗಿದೆಯೇ?

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News