‌ಮತ್ತೆ ʼನಕಲಿ ಪೋಸ್ಟ್‌ʼ ಮೂಲಕ ಮುಸ್ಲಿಂ ಮಹಿಳೆಯರ ಅವಹೇಳನ ಮಾಡಿದ ಪೋಸ್ಟ್‌ ಕಾರ್ಡ್

Update: 2022-01-25 15:54 GMT

ಬೆಂಗಳೂರು: ಸದಾ ಸುಳ್ಳುಸುದ್ದಿಗಳು ಹಾಗೂ ಧರ್ಮಗಳ ನಡುವೆ ದ್ವೇಷ  ಬಿತ್ತುವಂತಹ ಪೋಸ್ಟ್‌ ಗಳಿಗೆ ಕುಖ್ಯಾತಿಯಾಗಿರುವ ಬಲಪಂಥೀಯ ಸಾಮಾಜಿಕ ತಾಣ ಪುಟ ಪೋಸ್ಟ್‌ ಕಾರ್ಡ್‌ ಇದೀಗ ಮತ್ತೊಂದು ಸುಳ್ಳು ಸುದ್ದಿ ಪ್ರಕಟಿಸಿದೆ.  ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಬರಹದ ಪೋಸ್ಟರ್ ಒಂದನ್ನು  ಅದು ಪ್ರಕಟಿಸಿದೆ. ಸಾಲದ್ದಕ್ಕೆ ಇದು ಆಧಾರರಹಿತ ಮತ್ತು ನಕಲಿ ಸುದ್ದಿಯಾಗಿದೆ.

ಪೇಸ್‌ ಬುಕ್‌ ನ ಪೋಸ್ಟ್‌ ಕಾರ್ಡ್‌ ಪೇಜ್‌ ನಲ್ಲಿ ಮಂಗಳವಾರ ( ಜ. ೨೫)  ಪ್ರಕಟಿಸಿದ ಪೋಸ್ಟರ್‌ ನಲ್ಲಿ "ನಮ್ಮ ಇಸ್ಲಾಂನಲ್ಲಿ ಹೆಣ್ಣನ್ನು ಹೆರುವ ಕೃಷಿ ಎಂದು ಪರಿಗಣಿಸಲಾಗಿದೆ. ನಾವೆಲ್ಲರೂ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಆಗಲಿದ್ದೇವೆ ಮತ್ತು ಹಿಂದೂ ಹುಡುಗರನ್ನು ಮದುವೆಯಾಗುತ್ತೇವೆ. ಮತ್ತೆ ಯಾವುದೇ ತಲಾಖ್‌ ಇಲ್ಲ. ಹಲಾಲ್‌ ಕೂಡಾ ಇಲ್ಲ. ಸನಾತನ ಹಿಂದೂ ಧರ್ಮ ನಮ್ಮದಾಗಲಿ " ಎಂದು ಬರೆಯಲಾಗಿದೆ. ಅದರ ಜೊತೆ ಫಾತಿಮಾ ಖುರೇಷಿ, ಮುಂಬೈ ಎಂದು ಹೆಸರು ಹಾಕಿ ಮುಸ್ಲಿಂ ಮಹಿಳೆಯೊಬ್ಬರ ಫೋಟೋ ಹಾಕಲಾಗಿದೆ.  ಜೊತೆಗೆ "ಇಸ್ಲಾಂನಲ್ಲಿ ಹೆಣ್ಣನ್ನು ಭೋಗದ ವಸ್ತುವಂತೆ ಬಳಸುತ್ತಿದ್ದಾರೆ ಎಂಬುವುದನ್ನು ಸ್ವತಃ ಮುಸ್ಲಿಂ ಹೆಣ್ಣು ಮಕ್ಕಳೇ ಒಪ್ಪಿಕೊಂಡು ಹಿಂದೂ ಧರ್ಮದತ್ತ ಮುಖ ಮಾಡುತ್ತಿದ್ದಾರೆ. " ಎಂದು ಪೋಸ್ಟರ್‌ ನ ಕೆಳಗೆ  ಬರೆಯಲಾಗಿದೆ.

ಈ ಪೋಸ್ಟ್‌ ಎರಡು ವರ್ಷಗಳ ಹಿಂದೆ ಹಿಂದಿ ಭಾಷೆಯಲ್ಲಿ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ಅದೇ ಮಹಿಳೆಯ ಫೋಟೊ ಬಳಸಿ, ಹಿಂದಿಯಲ್ಲಿದ್ದ ಬರಹವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಜೊತೆಗೆ ಇನ್ನಷ್ಟು ದ್ವೇಷವನ್ನು ಪೋಸ್ಟ್‌ ನಲ್ಲಿ ತುಂಬಲಾಗಿದೆ. ಈ ಪೋಸ್ಟ್‌ ಬಗ್ಗೆ ೨೦೧೯ರಲ್ಲೇ newsmobile.in ಫ್ಯಾಕ್ಟ್‌ ಚೆಕ್‌ ಮಾಡಿದ್ದು, ಈ ವೇಳೆ ಇದೊಂದು ನಕಲಿ ಮತ್ತು ತಿರುಚಲ್ಪಟ್ಟ ಸುದ್ದಿ ಎಂದು ತಿಳಿದು ಬಂದಿದೆ.

ಯಾಂಡೆಕ್ಸ್‌ ಮೂಲಕ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ, ಇದು ಮರಿಯಮ್‌ ಖಾಲಿಕ್‌ ಎಂಬ ಮಹಿಳೆಯ ಚಿತ್ರವಾಗಿದೆ ಎನ್ನುವುದು ಬೆಳಕಿಗೆ ಬಂದಿದೆ. ಆದರೆ ಪೋಸ್ಟ್‌ ಕಾರ್ಡ್‌ ಇದನ್ನು ಫಾತಿಮಾ ಕುರೇಶಿ, ಮುಂಬೈ ಎಂಬ ಹೆಸರಿನಲ್ಲಿ ಕಪೋಲಕಲ್ಪಿತ ಹೇಳಿಕೆಯನ್ನು ಪ್ರಕಟಿಸಿದೆ. 2013 ರ ಸೆಪ್ಟೆಂಬರ್ 20 ರಂದು ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ (GEM) ಸೈಟ್‌ನಲ್ಲಿ ಪ್ರಕಟಿಸಿದ ವರದಿಯು  ಈ ಮಹಿಳೆ ನೊಬೆಲ್ ಪುರಸ್ಕೃತೆ  ಮಲಾಲಾ ಯೂಸುಫ್‌ಜಾಯ್ ಅವರ ಶಿಕ್ಷಕಿ ಮರಿಯಮ್ ಖಾಲಿಕ್ ಎಂದು ಹೇಳುತ್ತದೆ.  ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಕಿಯರ ಶಿಕ್ಷಣದ ಕುರಿತು ಮರಿಯಮ್ ಮಾತನಾಡುತ್ತಿದ್ದ  ಸಂದರ್ಭ ತೆಗೆದ ಚಿತ್ರ ಇದು . ಚಿತ್ರದಲ್ಲಿ , 'ನ್ಯೂಯಾರ್ಕ್‌ನಲ್ಲಿ ನಡೆದ ಇಎಫ್‌ಎ ವರದಿ ಸಮಾರಂಭದಲ್ಲಿ ಭಾಷಣ ನೀಡುತ್ತಿರುವ ಮರಿಯಮ್"‌ ಶೀರ್ಷಿಕೆ ಇದೆ . 

ಅದೇ ಲೇಖನವನ್ನು ವಿಶ್ವಸಂಸ್ಥೆಯ ಬಾಲಕಿಯರ ಶಿಕ್ಷಣ ಉಪಕ್ರಮದ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ. ವಿಶ್ವಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡಾ ಈ ವೀಡಿಯೊ ಅಪ್ಲೋಡ್‌ ಮಾಡಲಾಗಿದೆ. ಇನ್ನು ಪೋಸ್ಟ್ ಕಾರ್ಡ್ ಪ್ರಕಟಿಸಿದ  ಆ ಹೇಳಿಕೆಯ ಕುರಿತು ಇದುವರೆಗೂ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಆದ್ದರಿಂದ ಇದೊಂದು ನಕಲಿ ಸುದ್ದಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News