ರಾಜ್ಯದ 57 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ 50ಕ್ಕಿಂತಲೂ ಕಡಿಮೆ

Update: 2022-01-26 02:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ 50ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಳಪೆ ಮೂಲಸೌಕರ್ಯ ಮತ್ತು ಬೋಧನಾ ಸೌಲಭ್ಯದ ಕೊರತೆಯ ಕಾರಣದಿಂದ ಹೊಸ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ 50ಕ್ಕಿಂತಲೂ ಕಡಿಮೆ ಇದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆ 2021ರ ಡಿಸೆಂಬರ್ 31ರಂದು ಪೂರ್ಣಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾಹಿತಿಯ ಪ್ರಕಾರ 57 ಎಂಜಿಯರಿಂಗ್ ಕಾಲೇಜುಗಳಲ್ಲಿ ಕೋರ್ಸ್‌ಗಳಿಗೆ 50ಕ್ಕೂ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಂತೆಯೇ ಈ ಬಾರಿ ಅರ್ಹ ವಿದ್ಯಾರ್ಥಿಗಳ ಸಂಖ್ಯೆ ಅಧಿಕ ಇದ್ದರೂ, ಮೆಕ್ಯಾನಿಕಲ್ ಮತ್ತು ಸಿವಿಲ್ ಎಂಜಿನಿಯರಿಂಗ್ ಸೇರಿದಂತೆ ಕೆಲ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ.

ನಾಲ್ಕು ಕಾಲೇಜುಗಳಲ್ಲಿ 150 ವಿದ್ಯಾರ್ಥಿಗಳ ಪ್ರವೇಶಾವಕಾಶ ಕಲ್ಪಿಸಲಾಗಿದ್ದರೂ, ಈ ಕಾಲೇಜುಗಳಲ್ಲಿ ಪ್ರವೇಶ ಪಡೆದವರ ಸಂಖ್ಯೆ 25ಕ್ಕಿಂತ ಕಡಿಮೆ ಇದೆ. ಬಹುತೇಕ ಈ ಕಾಲೇಜುಗಳು ಬೆಂಗಳೂರಿನ ಹೊರಗಿದ್ದು, ಕೆಲವು ಸರ್ಕಾರಿ ಕಾಲೇಜುಗಳು ಮತ್ತು ಇನ್ನು ಕೆಲವು ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿವೆ.

ರಾಜ್ಯದಲ್ಲಿ ಇರುವ 230 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 23,000 ಸೀಟುಗಳು ಖಾಲಿ ಇವೆ. ಸರ್ಕಾರಿ ಕೋಟಾದಲ್ಲಿ ಸುಮಾರು 58110 ಸೀಟುಗಳು ಲಭ್ಯ ಇದ್ದವು. ಒಟ್ಟು 64484 ಸೀಟುಗಳು ಖಾಸಗಿ ಕೋಟಾದಲ್ಲಿವೆ. ಈ ಪೈಕಿ 48027 ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, 41483 ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ನೋಂದಾಯಿಸಿಕೊಂಡಿದ್ದಾರೆ.

2020ರ ಕೆಸಿಇಟಿಯಲ್ಲಿ 76 ಕಾಲೇಜುಗಳಲ್ಲಿ 50ಕ್ಕೂ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಇದೀಗ ಜಾಗೃತರಾಗಿದ್ದಾರೆ. ಅವರು ಪ್ರವೇಶಕ್ಕೆ ಮುನ್ನ ಕಾಲೇಜುಗಳ ಬಗ್ಗೆ ಸಂಶೋಧನೆ ನಡೆಸಿ ಕಳಪೆ ಮೂಲಸೌಕರ್ಯ ಇರುವ ಮತ್ತು ಉದ್ಯೋಗ ಸ್ಥಾನೀಕರಣ ಕಡಿಮೆ ಇರುವ ಕಾಲೇಜುಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News