ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಅಬ್ದುಲ್ ಖಾದರ್ ನಡಕಟ್ಟಿನ್ ಯಾರು? ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆ ಏನು?

Update: 2022-01-26 06:32 GMT
ಅಬ್ದುಲ್ ಖಾದರ್  ನಡಕಟ್ಟಿನ್

ಧಾರವಾಡ : ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರಕಾರ ಮಂಗಳವಾರ ಪ್ರಕಟಿಸಿರುವ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ  ರಾಜ್ಯದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಅವರಲ್ಲಿ ಓರ್ವ ಅಬ್ದುಲ್ ಖಾದರ್ ನಡಕಟ್ಟಿನ್.

ಅಬ್ದುಲ್ ಖಾದರ್ ನಡಕಟ್ಟಿನ್ ಪರಿಚಯ:

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಕಪ್ಪು ಮಣ್ಣಿನ ನೆಲ. ಸುಡು ಬಿಸಿಲಿನ ಊರು. ಇಂತಹ ಊರಿನಲ್ಲಿ ‘ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ’ದಲ್ಲಿ ಹೊಸ ಬಗೆಯ ಕೃಷಿ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ತೊಡಗಿಕೊಂಡವರು ಅಬ್ದುಲ್ ಖಾದರ್.

ಬಡ ಕುಟುಂಬದಲ್ಲಿ ಹುಟ್ಟಿರುವ ಅಬ್ದುಲ್ ಖಾದರ್  ಎಸೆಸೆಲ್ಸಿವರೆಗೆ ಶಿಕ್ಷಣ ಪಡೆದಿದ್ದು, ರೈತನ ಮಗನಾಗಿ ಬೆಳೆದು, ತನ್ನ 19ನೇ ವಯಸ್ಸಿನಲ್ಲೇ ಕೃಷಿ ಉಪಕರಣದಲ್ಲಿ ಸಂಶೋಧನೆ ಮಾಡಿದ್ದಾರೆ.

ಬೇರೆ ರಾಜ್ಯಗಳಿಂದ, ರಾಜ್ಯದ ನಾನಾ ಭಾಗಗಳಿಂದ ಖಾದರ್ ಅವರ ‘ನಡಕಟ್ಟಿನ ಕೃಷಿ ಯಂತ್ರೋಪಕರಣ’ಕ್ಕಾಗಿ ಹುಡುಕಿಕೊಂಡು ಬರುವುದುಂಟು. ಇವರ ಕೃಷಿ ಯಂತ್ರಗಳು ರೈತರಿಗೆ, ಕೃಷಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ, ಸಮಸ್ಯೆಗೆ ಪರಿಹಾರ ಸೂಚಿಸುವ ಸಾಧನಗಳು. 

ಬಾಲ್ಯದಿಂದಲೇ ಹೊಸತನದ ಹುಡುಕಾಟಕ್ಕೆ ಬಿದ್ದ ಅಬ್ದುಲ್ ಖಾದರ್, ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಕೃಷಿ ಕೆಲಸಗಳನ್ನು ಸುಲಭ ಮಾಡಿದ ಇವರ ಪ್ರಯತ್ನಕ್ಕೆ ‘ಕೃಷಿ ಅನ್ವೇಷಕ’ಗಳಂತಹ ಪ್ರಶಸ್ತಿಗಳು ಹುಡುಕಿಕೊಂಡು ಬಂದು ಗೌರವಿಸಿವೆ. 

60 ಎಕರೆ ಕೃಷಿ ಭೂಮಿ ಹೊಂದಿದ್ದ ಇಮಾಮ್ಸಾಬ್ ಅಪ್ಪಟ ಕೃಷಿಕ. ಇವರ ಒಬ್ಬನೇ ಮಗ ಅಬ್ದುಲ್ ಖಾದರ್. ಪದವಿ ಪಡೆದು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದು ಇಷ್ಟವಿಲ್ಲದೆ ಕೃಷಿ ಯಂತ್ರೋಪಕರಣಗಳ ತಯಾರಿಗೆ ಮುಂದಾದರು. 

ಖಾದರ್ ಕಂಡುಹಿಡಿದ ನಡಕಟ್ಟಿನ ಕೂರಗಿ ಜನಪ್ರಿಯತೆ ಪಡೆಯಿತು. 2004ರಿಂದ ಇಲ್ಲಿಯವರೆಗೆ 7250 ಕೂರಿಗೆಗಳನ್ನು ಇವರು ಮಾರಾಟ ಮಾಡಿದ್ದಾರೆ. ಇದರಿಂದ ದೇಶಕ್ಕೆ 748 ಕೋಟಿ ಹಣ ಉಳಿತಾಯವಾಗಿದೆ ಎನ್ನುವುದು ಅವರ ಲೆಕ್ಕಾಚಾರ. ಇದಾದ ನಂತರ ರೊಟೊವೇಟರ್, ಗೊಬ್ಬರ ಹಾಕುವುದು, ಬೀಜ ಬಿತ್ತುವುದು, ಎಡೆ ಹೊಡೆಯು ವುದು, ಔಷಧ ಸಿಂಪಡಿಸುವುದು ಹಾಗೂ ಭೂಮಿ ಹಸಿ ಇರುವಾಗಲೇ ಹುಲ್ಲು ತಿರುವಿ ಹಾಕುವಂತಹ ಐದು ಕೆಲಸವನ್ನು ಒಂದೇ ಯಂತ್ರ ಮಾಡುವ ಸಾಧನಗಳನ್ನೂ ಕಂಡುಹಿಡಿದರು.

ಹುಬ್ಬಳ್ಳಿಯಲ್ಲಿ ಬಿಡಿ ಭಾಗ ತಯಾರಿಕಾ ಘಟಕ ಹಾಗೂ ಅಣ್ಣಿಗೇರಿಯಲ್ಲಿ ಅವುಗಳನ್ನು ಜೋಡಿಸುವ ಘಟಕ ಸ್ಥಾಪಿಸಿದ್ದಾರೆ. 130 ಜನಕ್ಕೆ ಉದ್ಯೋಗ ನೀಡಿದ್ದಾರೆ. ಇದೀಗ ಈ ಕೇಂದ್ರವೇ ಈ ಊರಿನ ಪ್ರತಿಷ್ಠೆಯಾಗಿದೆ. ಇಷ್ಟು ಮಾತ್ರವಲ್ಲ ಕೂರಿಗೆ ಅಳವಡಿಸುವ ಆ ಸ್ಪಂಜ್ ನಿರ್ಮಾಣಕ್ಕೆ ಪೇಟೆಂಟ್ ಕೂಡಾ ಸಾಧಕ ಎಂಬ ಖ್ಯಾತಿಗೆ ಒಳಗಾದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News