ಉಳ್ಳಾಲ: ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲೆತ್ನಿಸಿದ ಪ್ರಿಯಕರ ಮೃತ್ಯು
ಉಳ್ಳಾಲ, ಜ.29: ಆತ್ಮಹತ್ಯೆಗೈಯಲು ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಮುಂದಾದ ಆಕೆಯ ಪ್ರಿಯಕರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮೇಶ್ವರ ಕಡಲ ಕಿನಾರೆಯಲ್ಲಿ ಶುಕ್ರವಾರ ಸಂಜೆ ನಡೆದಿರುವುದು ವರದಿಯಾಗಿದೆ. ಈ ನಡುವೆ ಯುವತಿಯನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ರಕ್ಷಿಸಿದ್ದಾರೆ.
ಮೃತರನ್ನು ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(29) ಯಾನೆ ಲಾಯ್ ಎಂದು ಗುರುತಿಸಲಾಗಿದೆ. ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22)ಆತ್ಮ ಹತ್ಯೆಗೆ ಯತ್ನಿಸಿ ಪಾರಾದ ಯುವತಿ. ಅಶ್ವಿತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಲಾಯ್ಡ್ ಡಿಸೋಜ ಮತ್ತು ಅಶ್ವಿತಾ ಕಳೆದ ಎಂಟು ವರುಷಗಳಿಂದ ಪರಸ್ಪರ ಪ್ರೇಮಿಸುತ್ತಿದ್ದರಂತೆ. ಈ ನಡುವೆ ಲಾಯ್ಡ್ ಅವರಿಗೆ ತೊಕ್ಕೊಟ್ಟು ಚೆಂಬುಗುಡ್ಡೆಯ ಬೇರೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಇದೆ ಎಂಬುದು ಅಶ್ವಿತಾ ಆರೋಪಿಸಿದ್ದಾರೆ. ಈ ವಿಚಾರವಾಗಿ ಮಾತುಕತೆಗಾಗಿ ಶುಕ್ರವಾರ ಸಂಜೆ ಇವರು ಮೂವರು ಸೋಮೇಶ್ವರ ಕಡಲ ಕಿನಾರೆಯಲ್ಲಿ ಸೇರಿದ್ದಾರೆ. ಈ ವೇಳೆ ಅಶ್ವಿತಾ ಬೇಸರಗೊಂಡು ಏಕಾಏಕಿ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿದ್ದರೆನ್ನಲಾಗಿದೆ. ಅವರನ್ನು ರಕ್ಷಿಸಲೆಂದು ತಕ್ಷಣ ಲಾಯ್ಡ್ ಕೂಡಾ ಸಮುದ್ರಕ್ಕೆ ಜಿಗಿದಿದ್ದಾರೆ. ಆದರೆ ಅವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಶ್ವಿತಾ ರಕ್ಷಿಸಲ್ಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರಾವಳಿ ಕಾವಲು ಪಡೆಯ ಮೋಹನ್ ಚಂದ್ರ, ಸುಜಿತ್, ಅಶೋಕ್ ಸೋಮೇಶ್ವರ, ಮೀನುಗಾರರಾದ ಕಲ್ಪೇಶ್ ಹಾಗೂ ಗಿರೀಶ್ ಸಮುದ್ರಪಾಲಾದವರನ್ನು ಹರಸಾಹಸಪಟ್ಟು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಿ ಲಾಯ್ಡ್ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.