ನೀಟ್ ಟಾಪರ್‌ಗೆ ಸೀಟು ಸಿಗಲಿಲ್ಲವೆಂದು ಸುಳ್ಳು ಸುದ್ದಿ ಪ್ರಕಟಿಸಿದ ‘ವಿಶ್ವವಾಣಿ’!

Update: 2022-01-30 02:45 GMT

ಬೆಂಗಳೂರು, ಜ. 29: `ವೈದ್ಯಕೀಯ ನೀಟ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದರೂ ಬ್ರಾಹ್ಮಣ ವಿದ್ಯಾರ್ಥಿಗೆ ಬೇಕಾದ ಗದಗ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅರವಳಿಕೆ ಶಾಸ್ತ್ರ(ಅನಸ್ತೇಷಿಯಾ) ವಿಭಾಗದಲ್ಲಿ ಸ್ನಾತಕೋತ್ತರ(ಪಿಜಿ) ಸೀಟು ಸಿಕ್ಕಿಲ್ಲ' ಎಂದು ಪ್ರತಿಪಾದಿಸುವ  ಸುದ್ದಿಯನ್ನು ವಿಶ್ವವಾಣಿ ಪತ್ರಿಕೆ ಜ.29ರ ಶನಿವಾರದಂದು ಪ್ರಕಟಿಸಿದೆ.

'ಮೀಸಲಾತಿ ಹೆಸರಿನಲ್ಲಿ ಸೀಟು ಹಂಚಿಕೆ ಮಾಡಿದರೆ ಬ್ರಾಹ್ಮಣರು ಸರಕಾರಿ ಕಾಲೇಜಿನಲ್ಲಿ ಅಭ್ಯಾಸ ಮಾಡಲು ಅವಕಾಶವಿಲ್ಲವೇ?' ಎಂಬ ವೈದ್ಯಕೀಯ ವಿದ್ಯಾರ್ಥಿ ಡಾ.ಗಗನ್ ಕುಬೇರ್ ಅವರ ವಿಡಿಯೋ ಹಾಗೂ ಈ ಕುರಿತಾದ  ವಿಶ್ವವಾಣಿ ಪತ್ರಿಕೆಯ ಸುದ್ದಿ ಮತ್ತು ಆ ಪತ್ರಿಕೆ ಸಂಪಾದಕರ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಗನ್‌ ಕುಬೇರ್ NEET PG-2021ರಲ್ಲಿ ಪಡೆದ ರ್‍ಯಾಂಕ್‌ ಎಷ್ಟು? 

`ಮೊದಲ ರ್‍ಯಾಂಕ್ ಪಡೆದಿದ್ದೇನೆಂದು ವಿಡಿಯೋದಲ್ಲಿ ಹೇಳಿಕೊಳ್ಳುವ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ ಅಸಲಿಗೆ ಪಡೆದಿದ್ದು `12406'ನೇ ರ್‍ಯಾಂಕ್. ಇದು ಗಗನ್ ಅವರೇ  ತನ್ನ ಯೂಟ್ಯೂಬ್‌‌ನ ವಿಡಿಯೊ ಡಿಸ್‌ಕ್ರಿಪ್ಷನ್‌ ಅಲ್ಲಿ ರ್‍ಯಾಂಕ್‌ ಬಗ್ಗೆ ಸ್ಪಷ್ಟೀಕರಣ ನೀಡಿರುವುದು.

ಆದರೆ, ಪತ್ರಿಕೆಯಲ್ಲಿ 'ಪಡೆದದ್ದು ಮೊದಲ ರ್‍ಯಾಂಕ್‌; ಆದರೂ ಸೀಟು  ಸಿಕ್ಕಿಲ್ಲ' ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿದೆ.  

2021ರ ನೀಟ್‌ ಪಿಜಿ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಪಡೆದವರು ಹೆಸರು ಅಮರ್ಥ್ಯ ಸೇನ್‌ ಗುಪ್ತಾ ಎಂದಾಗಿದ್ದು, 2021 ರ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ  ಗಗನ್ ಕುಬೇರ್ ಹೆಸರೇ ಇಲ್ಲ. 

ಇನ್ನು ವಾಸ್ತವದಲ್ಲಿ ಗದಗ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿರುವುದು ಅರವಳಿಕೆ ಶಾಸ್ತ್ರ ವಿಭಾಗದಲ್ಲಿ ಇರುವುದು ಕೇವಲ ಮೂರೇ ಮೂರು ಸ್ನಾತಕೋತ್ತರ(ಪಿಜಿ) ಸಿಟುಗಳು. ಆ ಪೈಕಿ ಒಂದು ಹಿಂದುಳಿದ ವರ್ಗ, ಒಂದು ಪರಿಶಿಷ್ಟ ಪಂಗಡ(ಎಸ್ಟಿ) ಹಾಗೂ ಮತ್ತೊಂದು ಅದೇ ಕಾಲೇಜಿನಲ್ಲಿ ಕಲಿಯುವ ವೈದ್ಯಕೀಯ ವಿದ್ಯಾರ್ಥಿಗೆ ಮೀಸಲಾಗಿದೆ.

ವಿಡಿಯೋದಲ್ಲಿ ಹೇಳಿಕೊಂಡಂತೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿ ಡಾ.ಗಗನ್ ಕುಬೇರ್ ಕೊಪ್ಪಳ, ಚಾಮರಾಜನಗರದಲ್ಲಿ ತನಗೆ ಅಗತ್ಯವಿರುವ ವಿಭಾಗದಲ್ಲಿ ಸೀಟು ಸಿಕ್ಕರೂ ಅಭ್ಯಾಸ ಮಾಡಲು ಸಿದ್ಧನಿಲ್ಲ. ಪಿಜಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದರೆ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟುಗಳ ಸಂಖ್ಯೆ ಬಹಳ ಕೊರತೆ ಇದೆ. ಜೊತೆಗೆ ವೈದ್ಯಕೀಯ ಕಾಲೇಜುಗಳಲ್ಲಿನ ಒಟ್ಟಾರೆ ಸೀಟುಗಳ ಪೈಕಿ ಶೇ.60ರಿಂದ 70ರಷ್ಟು ಸೀಟುಗಳನ್ನು ಹಣವುಳ್ಳವರಿಗೆ ನೀಡಲಾಗುತ್ತಿದೆ. ಹಣ ಪಾವತಿಸಿ ಕಲಿತ ವೈದ್ಯರು ಎಷ್ಟರ ಮಟ್ಟಿಗೆ ಚಿಕಿತ್ಸೆ ಕೊಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಒಟ್ಟಾರೆ ಸೀಟುಗಳು ಪೈಕಿ ಶೇ.50ರಷ್ಟು ಮೀಸಲಾತಿ ಕೋಟಾ(ಎಸ್ಸಿ-ಎಸ್ಟಿ, ಒಬಿಸಿಗಳಿಗೆ), ಉಳಿದ ಶೇ.50ರಷ್ಟು ಸಾಮಾನ್ಯ ವರ್ಗಕ್ಕೆ ಮೀಸಲು. ಈ ಮಧ್ಯೆ ಯಾವುದೇ ಹೋರಾಟವನ್ನು ಮಾಡದೆ ಶೇ.3ರಷ್ಟು ಇರುವ ಜನರಿಗೆ ಆರ್ಥಿಕವಾಗಿ ಹಿಂದುಳಿದವರ (ಇಡಬ್ಲ್ಯೂಎಸ್) ಹೆಸರಿನಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಸಾಮಾಜಿಕ ಪ್ರಾತಿನಿಧ್ಯ ಕಲ್ಪಿಸುವ ಮಹೋನ್ನತ್ತ ಉದ್ದೇಶದಿಂದಲೇ ಸಂವಿಧಾನಾತ್ಮಕವಾಗಿ ಮೀಸಲಾತಿ ಕಲ್ಪಿಸಿದರೂ ಇನ್ನೂ ಎಲ್ಲ ಕ್ಷೇತ್ರಗಳಲ್ಲಿಯೂ `ಶೋಷಿತ' ಪ್ರಾತಿನಿಧ್ಯ ಸಿಕ್ಕಿಲ್ಲ. ವಾಸ್ತವ ಸ್ಥಿತಿ ಹೀಗಿದ್ದರೂ `ಮೀಸಲಾತಿ' ವಿರುದ್ಧದ ಇವರ ಅಸಹನೆ ಮತ್ತು ಅಸಮಾಧಾನಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ.

ಪಿಜಿ ವೈದ್ಯಕೀಯ ಸೀಟುಗಳನ್ನು ಸರಕಾರಿ ಕೋಟಾದಡಿಯಲ್ಲಿ ಒಟ್ಟಾರೆ ಸೀಟುಗಳನ್ನು ಹಾಗೂ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ರ್‍ಯಾಂಕ್ ಆಧಾರಿತವಾಗಿ ಮೊದಲಿಗೆ ರಾಷ್ಟ್ರೀಯ ಮಟ್ಟದಲ್ಲಿ ಎರಡು ಸುತ್ತುಗಳಲ್ಲಿ ವಿಷಯವಾರು ಹಂಚಿಕೆ ಮಾಡಲಾಗುತ್ತದೆ. ಆ ಬಳಿಕ ರಾಜ್ಯ ಮಟ್ಟದಲ್ಲಿಯೂ ಪರೀಕ್ಷೆಯನ್ನು ಆಧರಿಸಿ ಹಂಚಿಕೆ ಮಾಡಲಾಗುತ್ತಿದೆ. ಮೊದಲ ಸುತ್ತಿನಲ್ಲೆ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಪ್ರವೇಶ ಪಡೆಯದಿದ್ದರೆ ಮರು ಹಂಚಿಕೆ ಮಾಡಲಾಗುತ್ತದೆ. ಆದರೆ ವೀಡಿಯೋದಲ್ಲಿ ವೈದ್ಯಕೀಯ ವಿದ್ಯಾರ್ಥಿಯ ಮಾತುಗಳು ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಅಸಮಾನತೆ, ಸಂವಿಧಾನಿಕವಾಗಿ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ದೃಷ್ಟಿಯಿಂದ ಮೀಸಲಾತಿ ಕಲ್ಪಿಸಿರುವ ಬಗ್ಗೆ ಎಂಬಿಬಿಎಸ್ ಕಲಿತ ವಿದ್ಯಾರ್ಥಿ ಗಗನ್ ಕುಬೇರ್ , ಪತ್ರಿಕೆಯೊಂದರ ಸಂಪಾದಕರ ಟ್ವೀಟ್ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

`ಏನ್ರಿ ನಿಮ್ಮ ಸಮಸ್ಯೆ ಎಷ್ಟು ವರ್ಷ ಜಾತಿ ಶೋಷಣೆ ಮಾಡಿದ್ದೀರಿ ಅದರ ಎರಡುಪಟ್ಟು ಮೀಸಲಾತಿ ಇರ್ತದೆ' ಎಂದು ಟ್ವೀಟ್ಟರ್ ನಲ್ಲಿ ವ್ಯಕ್ತಿಯೊಬ್ಬರು ಕಿಡಿಕಾರಿದ್ದಾರೆ.

`ಈ ಬ್ರದರ್ ತುಂಬಾ ಕಷ್ಟ ಪಟ್ಟು ಓದಿರುತ್ತಾನೆ, ಅವನ ನಿರೀಕ್ಷೆಯಂತೆ ರ್‍ಯಾಂಕ್ ಬಂದಿಲ್ಲ. ಬ್ರದರ್ ಗದಗದಲ್ಲಿ ಒಂದು ಕ್ಲಿನಿಕ್ ಹಾಕಿಕೊಂಡು ಅಥವಾ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಮುಂದಿನ ವರ್ಷ ಇನ್ನೂ ಚೆನ್ನಾಗಿ ಅಭ್ಯಾಸ ಮಾಡಿ ಮೊದಲ ರ್‍ಯಾಂಕ್  ಪಡೆದು ಒಂದೊಳ್ಳೆ ಪಿಜಿ ಕೋರ್ಸ್ ಸೇರಲಿ' ಎಂದು ನಾಗೇಗೌಡ ಕೀಲಾರ ಶಿವಲಿಂಗಯ್ಯ ಬರೆದುಕೊಂಡಿದ್ದಾರೆ.

`ಶೇ.2ರಷ್ಟು ಇರುವ ಬ್ರಾಹ್ಮಣರಿಗೂ ಈಗ ಶೇ.10ರಷ್ಟು ಮೀಸಲಾತಿ ದೊರೆಯುತ್ತಿದೆ. ಶೇ.25ರಷ್ಟು ಇರುವ ದಲಿತರಿಗೆ ಕೇವಲ ಶೇ. 18ರಷ್ಟು ಮೀಸಲಾತಿ ಇದೆ. ಅದನ್ನು ನೂರಕ್ಕೂ ಹೆಚ್ಚು ಸಮುದಾಯಗಳಿಗೆ ಹಂಚಲಾಗುತ್ತದೆ. ಈ ಬ್ರಾಹ್ಮಣ ಹುಡುಗನಿಗೆ ಗದಗ್  ಬದಲಾಗಿ ಬೇರೆ ಇನ್ಯಾವುದಾದರೂ ಕಾಲೇಜಿನಲ್ಲಿ ಖಂಡಿತ ಜನರಲ್ ಕೆಟಗರಿಯಲ್ಲಿ ಸೀಟು ಸಿಕ್ಕಿರುತ್ತದೆ. ಆತ ಅದನ್ನು ಮರೆಮಾಚಿ ಗದಗಿನಲ್ಲೇ ಬೇಕೆಂದು ಹಠ ಹಿಡಿಯುತ್ತಿರುವುದು ತಪ್ಪು. ಮೀಸಲಾತಿ ವ್ಯವಸ್ಥೆ ಹಾಗೂ ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಇವರು ಹೂಡಿದ ಹುನ್ನಾರ ಇರಬೇಕು. ಉಳಿದ ಶೇ.97 ಹಿಂದುಳಿದ ವರ್ಗಗಳು ಇವರ ಮಾತುಗಳನ್ನು ಯಾವುದೇ ಕಾರಣಕ್ಕೆ ನಂಬಬಾರದು'

-ಎಲ್.ಎನ್.ಮುಕುಂದರಾಜು ಹಿರಿಯ ಸಾಹಿತಿ

`ವಿಡಿಯೋದಲ್ಲಿರುವ ಆ ವಿದ್ಯಾರ್ಥಿ ಮೊದಲ ರ್‍ಯಾಂಕ್ ಬಂದಿದ್ದೀನಿ ಎಂದು ಹೇಳಿಲ್ಲ. ಆದರೆ, ಪತ್ರಿಕೆ ವರದಿಗಾರ ಹಾಗೆ ಸುಳ್ಳು ಸುದ್ದಿ ಹಾಕಿದ್ದಾನೆ. ಬಟ್ ಯಾಕೆ ಗದಗ್ ಕಾಲೇಜಲ್ಲಿ ಎಲ್ಲ ನಾಲ್ಕು ಸೀಟು ಮೀಸಲಾಗಿದೆ ಎಂಬುದನ್ನು ನಾವು ತಿಳಿಸಬೇಕಿದೆ. ಮೀಸಲಾತಿ ಆಧಾರದಲ್ಲಿ ಸೀಟು ಹಂಚಿಕೆ ಮಾಡಿದ ಕಾರಣಕ್ಕೆ ಹೀಗೆ ಆಗಿದೆ. ಇದರಲ್ಲಿ ಹೊಸದೇನಲ್ಲ'

ವಿಕಾಸ್ ಆರ್.ಮೌರ್ಯ

Full View
Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News