ವಲಸಿಗರನ್ನು ಲಿಬಿಯಾಕ್ಕೆ ವಾಪಾಸು ಕಳಿಸಬೇಡಿ: ಯುರೋಪಿಯನ್ ಯೂನಿಯನ್ ಗೆ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಆಗ್ರಹ

Update: 2022-01-31 16:11 GMT
ಲಿಬಿಯಾ ವಲಸಿಗರು (ಸಾಂದರ್ಭಿಕ ಚಿತ್ರ:PTI)

ಕೈರೊ, ಜ.31: ಲಿಬ್ಯಾಕ್ಕೆ ಸಂಬಂಧಿಸಿ ವಲಸೆ ನೀತಿಯನ್ನು ಬದಲಾಯಿಸುವಂತೆ ಯುರೋಪಿಯನ್ ಯೂನಿಯನ್ ಅನ್ನು ಆಗ್ರಹಿಸಿರುವ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್, ಈಗಿನ ವಲಸೆನೀತಿಯು ವಲಸಿಗರನ್ನು ಉತ್ತರ ಆಫ್ರಿಕಾ ದೇಶದಲ್ಲಿನ ನರಕಸದೃಶ ಪರಿಸ್ಥಿತಿಗೆ ವಲಸಿಗರನ್ನು ದೂಡುತ್ತಿದೆ ಎಂದು ಹೇಳಿದೆ.

ವಲಸಿಗರು ಯುರೋಪಿಯನ್ ದೇಶಗಳನ್ನು ತಲುಪುವುದನ್ನು ತಡೆಯುವ ಲಿಬಿಯಾ ಅಧಿಕಾರಿಗಳ ಪ್ರಯತ್ನಕ್ಕೆ ಯುರೋಪಿಯನ್ ಯೂನಿಯನ್ ನೆರವು ನೀಡಿದ ಬಳಿಕದ ಕಳೆದ 5 ವರ್ಷದಿಂದ 82,000ಕ್ಕೂ ಅಧಿಕ ವಲಸಿಗರನ್ನು ತಡೆದು ಲಿಬಿಯಾಕ್ಕೆ ವಾಪಾಸು ಕಳುಹಿಸಲಾಗಿದೆ . ಹೀಗೆ ವಾಪಾಸು ಬಂದವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಹಿತ ಹಲವರನ್ನು ಸರಕಾರಿ ಸ್ವಾಮ್ಯದ ಬಂಧನ ಕೇಂದ್ರದಲ್ಲಿರಿಸಲಾಗಿದೆ . ಇಲ್ಲಿ ಇವರು ಚಿತ್ರಹಿಂಸೆ, ಅತ್ಯಾಚಾರ, ಸುಲಿಗೆ ಮತ್ತಿತರ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ . ಇನ್ನು ಕೆಲವರು ನಾಪತ್ತೆಯಾಗಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದೆ.

ಲಿಬಿಯಾ ಅಧಿಕಾರಿಗಳೊಂದಿಗೆ ಸಹಕರಿಸುತ್ತಿರುವ ಲಿಬಿಯಾದ ಅಧಿಕಾರಿಗಳು ಅಸಹಾಯಕ ಜನರನ್ನು ಲಿಬಿಯಾದಲ್ಲಿನ ಊಹೆಗೂ ನಿಲುಕದ ಭೀಕರತೆಯಲ್ಲಿ ಸಿಲುಕಿಸಿದ್ದಾರೆ. ಈ ನಿರ್ದಯ ಉಪಕ್ರಮಗಳಿಗೆ ಅಂತ್ಯಹಾಡಲು ಇದು ಸಕಾಲವಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ವಲಸಿಗರ ವಿಷಯಕ್ಕೆ ಸಂಬಂಧಿಸಿದ ಸಂಶೋಧಕ ಮ್ಯಾಟಿಯೊ ಡಿ ಬೆಲ್ಲಿಸ್ ಹೇಳಿದ್ದಾರೆ. ಲಿಬಿಯಾವನ್ನು ದೀರ್ಘಾವಧಿಯವರೆಗೆ ಆಳಿದ್ದ ಸರ್ವಾಧಿಕಾರಿ ಮೌಮರ್ ಗಡಾಫಿ 2011ರಲ್ಲಿ ನೇಟೋ ಬೆಂಬಲಿತ ಸಂಘರ್ಷದಲ್ಲಿ ಪದಚ್ಯುತಗೊಂಡು ಹತರಾದ ಬಳಿಕ ಲಿಬಿಯಾ ಪ್ರಕ್ಷುಬ್ಧತೆಯಲ್ಲಿ ಮುಳುಗಿದೆ. ಅಲ್ಲದೆ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಯುರೋಪ್ನತ್ತ ಪಲಾಯನ ಮಾಡುವ ವಲಸಿಗರು ಬಳಸುವ ಪ್ರಮುಖ, ಆದರೆ ಅಪಾಯಕಾರಿ ಮಾರ್ಗವಾಗಿ ಗುರುತಿಸಿಕೊಂಡಿದೆ.

ಹೇರಳ ತೈಲ ನಿಕ್ಷೇಪಗಳಿರುವ ದೇಶಗಳಲ್ಲಿನ ಗೊಂದಲದ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆದಾರರು ಲಿಬಿಯಾವು ಇತರ 6 ದೇಶಗಳೊಂದಿಗೆ ಹೊಂದಿರುವ ಗಡಿಯ ಮೂಲಕ ವಲಸಿಗರನ್ನು ಮಾನವ ಕಳ್ಳಸಾಗಾಣಿಕೆ ಮಾಡುತ್ತಿದೆ. ಅಸುರಕ್ಷಿತ ರಬ್ಬರ್ ದೋಣಿಯಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ವಲಸಿಗರನ್ನು ಅಪಾಯಕಾರಿಯಾಗಿ ಮೆಡಿಟರೇನಿಯನ್ ಸಮುದ್ರ ಮಾರ್ಗವಾಗಿ ಕರೆದೊಯ್ಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಲಿಬಿಯಾದಿಂದ ವಲಸಿಗರ ಹರಿವನ್ನು ತಡೆಯುವ ಪ್ರಯತ್ನವನ್ನು ಹೆಚ್ಚಿಸಿರುವ ಯುರೋಪಿಯನ್ ಯೂನಿಯನ್, ಇದಕ್ಕಾಗಿ ಸುಮಾರು 516 ಮಿಲಿಯನ್ ಡಾಲರ್ ಮೊತ್ತವನ್ನು ತೆಗೆದಿರಿಸಿದೆ.

ಆಫ್ರಿಕಾಕ್ಕಾಗಿ ಯುರೋಪಿಯನ್ ಯೂನಿಯನ್ ಟ್ರಸ್ಟ್ ಫಂಡ್ ಎಂಬ ಹೆಸರಿನ ಈ ನಿಧಿಯ ಬಹುಪಾಲನ್ನು ವಲಸೆ ತಡೆ ಮತ್ತು ಗಡಿನಿರ್ವಹಣೆ ಉಪಕ್ರಮಗಳಿಗೆ ವ್ಯಯಿಸಲಾಗುತ್ತಿದೆ. ಸಿಬಂದಿಗಳಿಗೆ ತರಬೇತಿ, ಲಿಬಿಯಾ ತಟರಕ್ಷಣ ಪಡೆಗಳಿಗೆ ನವೀಕೃತ ದೋಣಿ ಒದಗಿಸುವುದು, ಸೆಟಿಲೈಟ್ ಫೋನ್‌ಗಳು, ಸಮವಸ್ತ್ರಗಳ ಜತೆಗೆ ಮುಂದಿನ 2 ವರ್ಷದಲ್ಲಿ 3 ಅತ್ಯಾಧುನಿಕ ಗಸ್ತು ನೌಕೆಯನ್ನೂ ಒದಗಿಸುವ ಯೋಜನೆಯಿದೆ. ಲಿಬಿಯಾದಲ್ಲಿ ಮಾನವ ಕಳ್ಳಸಾಗಾಣಿಕೆದಾರರ ಕೈಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ವಲಸಿಗರ ವಿರುದ್ಧ ದೌರ್ಜನ್ಯ, ಚಿತ್ರಹಿಂಸೆ, ನಿಂದನೆ ಪ್ರಕರಣಗಳು ಸಮುದ್ರಯಾನದ ಸಂದರ್ಭ ಮತ್ತು ಬಂಧನ ಕೇಂದ್ರದಲ್ಲಿ ಅವ್ಯಾಹತವಾಗಿ ಮುಂದುವರಿದಿದೆ ಎಂದು ಕಳೆದ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆ ನಿಯೋಜಿತ ತನಿಖಾ ಸಮಿತಿ ವರದಿ ಮಾಡಿದೆ.

ಲಿಬಿಯಾದ ಹಾಲಿ ಸರಕಾರ ನಿಂದನೆ ಮತ್ತು ದೌರ್ಜನ್ಯಕ್ಕೆ ಪ್ರೋತ್ಸಾಹ ನೀಡುವುದನ್ನು ಮುಂದುವರಿಸಿದೆ. ಕಳೆದ ತಿಂಗಳು ಬಂಧನ ಕೇಂದ್ರದ ಮೇಲುಸ್ತುವಾರಿ ವಹಿಸುವ ಸಮಿತಿಗೆ ಸಶಸ್ತ್ರ ಹೋರಾಟಪಡೆಯ ಮುಖಂಡ ಮುಹಮ್ಮದ್ ಅಲ್-ಖೋಜಾರನ್ನು ನೇಮಿಸಿರುವುದು ಇದಕ್ಕೆ ಇತ್ತೀಚಿನ ನಿದರ್ಶನವಾಗಿದೆ. ವಲಸಿಗರ ವಿರುದ್ಧದ ದೌರ್ಜನ್ಯದಲ್ಲಿ ಭಾಗಿಯಾದ ಆರೋಪ ಇವರ ಮೇಲಿದೆ ಎಂದು ಹೇಳಿರುವ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್, ಈಗಿನ ಧೋರಣೆಯನ್ನು ಕೈಬಿಟ್ಟು, ಲಿಬಿಯಾದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸಾವಿರಾರು ವಲಸಿಗರಿಗೆ ಅಂತರಾಷ್ಟ್ರೀಯ ಸುರಕ್ಷತೆ ಪಡೆಯುವ ಕಾನೂನುವ್ಯವಸ್ಥೆಗಳನ್ನು ತುರ್ತಾಗಿ ಒದಗಿಸುವ ಅಗತ್ಯವಿದೆ ಎಂದು ಯುರೋಪಿಯನ್ ಯೂನಿಯನ್‌ಗೆ ಕರೆ ನಿಡಿದೆ.

ಐಸಿಸಿಗೆ ದೂರು

ವಲಸಿಗರ ವಿಷಯಕ್ಕೆ ಸಂಬಂಧಿಸಿ ಯುರೋಪಿಯನ್ ದೇಶಗಳ ಕಾರ್ಯನೀತಿಯ ವಿರುದ್ಧದ ವ್ಯಾಪಕ ಟೀಕೆಗೆ ತನಿಖಾ ಸಮಿತಿಯ ವರದಿ ಪುಷ್ಟಿ ನೀಡಿದ ಬೆನ್ನಲ್ಲೇ, ಮಾನವೀಯತೆಯ ವಿರುದ್ಧದ ಅಪರಾಧಕ್ಕಾಗಿ ಲಿಬಿಯಾ ಮತ್ತು ಯುರೋಪ್ ಅಧಿಕಾರಿಗಳು, ಮಾನವ ಕಳ್ಳಸಾಗಾಣಿಕೆದಾರರು, ಭದ್ರತಾ ಸಿಬಂದಿ ಹಾಗೂ ಇತರರನ್ನು ವಿಚಾರಣೆ ಮತ್ತು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ದಲ್ಲಿ ಕನಿಷ್ಟ 3 ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News