ಪ್ರಧಾನಿ ಮೋದಿ ರೂಪದಲ್ಲಿ ಸ್ವಾಮಿ ವಿವೇಕಾನಂದರ ಪುನರ್ಜನ್ಮ: ಸಚಿವೆ ಶಶಿಕಲಾ ಜೊಲ್ಲೆ‌

Update: 2022-02-02 07:05 GMT

ವಿಜಯನಗರ, ಫೆ.2: ಪ್ರಧಾನಿ ನರೇಂದ್ರ ಮೋದಿಯವರ ರೂಪದಲ್ಲಿ ಸ್ವಾಮಿ ವಿವೇಕಾನಂದರ ಪುನರ್ಜನ್ಮವಾಗಿದೆ ಎಂದು  ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವೆ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ‌ ಹೇಳಿದ್ದಾರೆ.

ಹೊಸಪೇಟೆ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಸ್ವಾಮಿ ವಿವೇಕಾನಂದರು ದೇಶದ ಸಂಸ್ಕೃತಿ, ಪರಂಪರೆಯನ್ನು ವಿಶ್ವಕ್ಕೆ‌ ಪರಿಚಯಿಸಿದ್ದರು. ಅದೇ ಕಾರ್ಯವನ್ನು ಪ್ರಧಾನಿ ಮೋದಿ ಮಾಡುತ್ತಿದ್ದು, ಅವರ ನೇತೃತ್ವದಲ್ಲಿ ಭಾರತ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ, ದೇಶ ಸುಭದ್ರವಾಗಿದೆ. ಭಾರತಕ್ಕೆ ವಿಶ್ವಗುರುವಿನ ಸ್ಥಾನ ತಂದುಕೊಟ್ಟಿದ್ದಾರೆ ಎಂದರು.

ನೂತನ ವಿಜಯನಗರ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಗೆ ಫೆ.4ರಂದು ಜಿಲ್ಲಾ ಹಂತದ ಮುಖ್ಯಸ್ಥರು ಚುನಾಯಿತ ಪ್ರತಿನಿಧಿಗಳು ಮುಖ್ಯಮಂತ್ರಿಯೊಂದಿಗೆ ಸಭೆ ಆಯೋಜಿಸಿರುವುದಾಗಿ ಅವರು ತಿಳಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್ ಅವರಿಂದ ಜಿಲ್ಲೆ ಹೆಚ್ಚು ಅಭಿವೃದ್ಧಿ ಕಾಣುತ್ತದೆ ಎಂಬ ಭರವಸೆ ಇದೆ. ಅದಕ್ಕೆ ಎಲ್ಲ‌ ರೀತಿಯ ಸಹಕಾರ‌ ಪಕ್ಷ ನೀಡಲಿದೆ ಎಂದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಮಾತನಾಡಿದರು.

ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಸುವರ್ಣ, ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ, ಮಂಡಲ ಅಧ್ಯಕ್ಷರಾದ ಬಸವರಾಜ ನಾಲತ್ವಾಡ, ಕವಿತಾ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಿರಣ್, ಮುಖಂಡರಾದ ಶಶಿಧರ ಸ್ವಾಮಿ, ಪ್ರಿಯಾಂಕ ಜೈನ್, ದಯಾನಂದ, ಸಾಲಿ ಸಿದ್ದಯ್ಯ ಸ್ವಾಮಿ, ಟಿಂಕರ್ ರಫೀಕ್ ಹುಡಾ ಅಧ್ಯಕ್ಷ ಅಶೋಕ್ ಜೀರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News