ಶೃಂಗೇರಿ: ಯುವತಿ ನಾಪತ್ತೆಗೆ ಲವ್ ಜಿಹಾದ್ ಬಣ್ಣ ನೀಡಿದ್ದ ಬಜರಂಗದಳಕ್ಕೆ ವಿಡಿಯೋ ಮೂಲಕ ತಿರುಗೇಟು ನೀಡಿದ ಯುವತಿ

Update: 2022-02-02 07:44 GMT

ಚಿಕ್ಕಮಗಳೂರು, ಫೆ.2: ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣವೊಂದು ಶೃಂಗೇರಿಯಲ್ಲಿ ನಡೆದಿದ್ದು, ಇದಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಲವ್ ಜಿಹಾದ್‌ನ ಬಣ್ಣ ನೀಡಲು ಮುಂದಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಯುವತಿ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾಳೆ. ತನ್ನಿಷ್ಟದಂತೆ ತಾನು ಪ್ರೀತಿಸುತ್ತಿರುವ ಯುವಕನ ಜತೆ ಸ್ವಇಚ್ಛೆಯಿಂದ ಹೋಗಿದ್ದು, ನಾವಿಬ್ಬರು ಮದುವೆಯಾಗಲಿದ್ದೇವೆ ಎಂದು ಹೇಳಿರುವ ವೀಡಿಯೊ ಸಂದೇಶ ಇದೀಗ ವೈರಲ್ ಆಗಿದೆ.

ಘಟನೆ ವಿವರ: ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ನೆಲೆಸಿರುವ ಹಿಂದೂ ಸಮುದಾಯ ಯುವತಿಗೆ ಈ ಹಿಂದೆ ಶಿವಮೊಗ್ಗದಲ್ಲಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದ ಬಾಪು ನಗರದ ಜುನೈದ್ ಎಂಬಾತನ ಪರಿಚಯವಾಗಿದೆ. ಈ ಪರಿಚಯ ಪ್ರೀತಿಗೆ ತಿರುಗಿತ್ತೆನ್ನಲಾಗಿದೆ. ಬಳಿಕದ ಬೆಳವಣಿಗೆಯಲ್ಲಿ ಯುವತಿಯು ಜುನೈದ್ ವಿರುದ್ಧವೇ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಜುನೈದ್ ತನ್ನನ್ನು ಹಿಂದೂ ಸಮುದಾಯದವನೆಂದು ಹೇಳಿ ಪರಿಚಯಿಸಿಕೊಂಡಿದ್ದು, ಶಿವಮೊಗ್ಗದಲ್ಲಿ ಆಗಾಗ್ಗೆ ತನ್ನನ್ನು ಭೇಟಿಯಾಗುತ್ತಿದ್ದ. ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಯುವತಿ ದೂರಿದ್ದಳು. ಅದರಂತೆ ಪೊಲೀಸರು ಜುನೈದ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು. ಜುನೈದ್ ಸುಮಾರು 2 ತಿಂಗಳುಗಳ ಕಾಲ ಜೈಲಿನಲ್ಲಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ.

ಸದ್ಯ ಜೈಲಿನಿಂದ ಹೊರಬಂದಿರುವ ಜುನೈದ್‌ನೊಂದಿಗೆಯೇ ದೂರು ನೀಡಿದ್ದ ಯುವತಿ ನಾಪತ್ತೆಯಾಗಿದ್ದಾಳೆಂದು ಹೇಳಲಾಗುತ್ತಿದ್ದು, ಯುವತಿಯನ್ನು ಲವ್‌ ಜಿಹಾದ್ ಖೆಡ್ಡಾಕ್ಕೆ ಕೆಡವಲಾಗಿದೆ ಎಂದು ಆರೋಪಿಸಿ ಶೃಂಗೇರಿ ತಾಲೂಕಿನ ಬಜರಂಗದಳದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ ಎಂಬ

ಆರೋಪ ಕೇಳಿಬರುತ್ತಿದೆ. ಈ ಮಧ್ಯೆ ಜುನೈದ್‌ನೊಂದಿಗೆ ನಾಪತ್ತೆಯಾಗಿದ್ದಾಳೆಂದು ಹೇಳಲಾಗುತ್ತಿರುವ ಯುವತಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ತನ್ನಿಷ್ಟದ ಯುವಕನ ಜೊತೆ ತಾನು ಹೋಗಿದ್ದು, ಮದುವೆ ಆಗಲಿದ್ದೇವೆ ಎಂದು ಹೇಳಿದ್ದಾಳೆ.

"ನಾನು ಜುನೈದ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಆತ ಮುಸ್ಲಿಂ ಸಮುದಾಯದವನು ಎಂಬ ಸತ್ಯ ತನಗೆ ಮೊದಲೇ ತಿಳಿದಿತ್ತು. ನಾನು ಮುಸ್ಲಿಂ ಸಮುದಾಯದ ಯುವಕನ್ನನ್ನು ಇಷ್ಟ ಪಡುತ್ತಿದ್ದೇನೆಂದು ಬಜರಂಗದಳದವರು ನಮ್ಮಿಬ್ಬರನ್ನು ಬೇರೆ ಮಾಡುವ ಉದ್ದೇಶದಿಂದ ನನ್ನ ಮನೆಯ ಬಳಿ ಬಂದು ಗಲಾಟೆ ಮಾಡಿ, ಬೇರೆ ಮಾಡಿದ್ದರು. ಆತ ಮುಸ್ಲಿಂ ಎಂದು ತನಗೆ ಮೊದಲೇ ಗೊತ್ತಿತ್ತು ಎಂದು ಹೇಳಿದರೇ ಜುನೈದ್‌ಗೆ ಏನಾದರೂ ಮಾಡುತ್ತೇವೆ ಎಂದು ಜೀವಬೆರಿಕೆ ಹಾಕಿ, ಬೆದರಿಸಿದ್ದರು. ಜೀವ ಬೆದರಿಕೆಯೊಡ್ಡಿ ಜುನೈದ್‌ನನ್ನು ಸಂಪರ್ಕಿಸದಂತೆ ಮಾಡಿದ್ದರು. ನಾನು ಜುನೈದ್‌ನನ್ನು ಇಷ್ಟ ಪಟ್ಟಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ನಾನು ಜುನೈದ್‌ನೊಂದಿಗೆ ಹೋಗುತ್ತಿದ್ದೇನೆ. ನಾವಿಬ್ಬರೂ ಮದುವೆ ಆಗುತ್ತೇವೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ನನ್ನ ಹಾಗೂ ಜುನೈದ್ ಕುಟುಂಬಕ್ಕೆ ಬಜರಂಗದಳದವರಿಂದ ಯಾವುದೇ ತೊಂದರೆ ಆಗಬಾರದು" ಎಂದು ಯುವತಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾಳೆ.

ಯುವತಿಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರೇಮಿಗಳನ್ನು ಬೇರ್ಪಡಿಸಲು ಲವ್‌ ಜಿಹಾದ್ ಆರೋಪ ಹೊರಿಸಿ ಗೊಂದಲ ಮೂಡಿಸುತ್ತಿರುವ ಬಜರಂಗದಳದ ಮುಖಂಡರ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಇದ‍ಲ್ಲದೆ, ಕಳೆದೆರಡು ದಿನಗಳಿಂದ ಯುವತಿ ನಾಪತ್ತೆಯಾಗಿದ್ದಾಳೆಂದು ಬಜರಂಗದಳದ ಮುಖಂಡರು ಆರೋಪಿಸುತ್ತಿದ್ದರೂ ಯುವತಿ ನಾಪತ್ತೆಯಾಗಿರುವ ಅಥವಾ ಆಕೆಯನ್ನು ಅಪಹರಿಸಿರುವ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News