ಕಾಂಗ್ರೆಸ್ ನಲ್ಲೂ ಒಳಜಗಳ ಇರಬಹುದು: ಸತೀಶ್ ಜಾರಕಿಹೊಳಿ

Update: 2022-02-02 10:25 GMT

ಚಿತ್ರದುರ್ಗ, ಫೆ.2: ಉಳಿದ ಪಕ್ಷಗಳಲ್ಲಿ ಇರುವಂತೆ ಕಾಂಗ್ರೆಸ್‍ ಪಕ್ಷದಲ್ಲೂ ಒಳಜಗಳ ಇರಬಹುದು. ಇದರಿಂದ ಪಕ್ಷ ಸಂಘಟನೆಗೆ ತೊಂದರೆ ಉಂಟಾಗಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ಗುಂಪಿನ ನಾಯಕರಿಗೆ ಮತ ಹಾಕುವುದಿಲ್ಲ. ಬದಲಿಗೆ ಪಕ್ಷದ ಚಿಹ್ನೆಗೆ ಮತ ಚಲಾಯಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ‌.

ಬುಧವಾರ ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ, ಜೆಡಿಎಸ್‌ನಲ್ಲಿ ಇರುವಂತೆ ಕಾಂಗ್ರೆಸ್‌ನಲ್ಲಿಯೂ ಜಗಳ ಇರಬಹುದು. ಆದರೆ, ಇದರಿಂದ ಪಕ್ಷ ಸಂಘಟನೆಗೆ ತೊಂದರೆ ಉಂಟಾಗಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ಗುಂಪಿನ ನಾಯಕರಿಗೆ ಮತ ಚಲಾವಣೆ ಮಾಡುವುದಿಲ್ಲ. ಅವರು ಮತ ಹಾಕುವುದು ಪಕ್ಷದ ಗುರುತಿಗೆ. ಚುನಾವಣೆಯಲ್ಲಿ 113 ಶಾಸಕರು ಗೆದ್ದ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತದೆ. ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ’ಎಂದರು.

ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಗುಂಪುಗಳಿವೆ. ಬಿಜೆಪಿಯಲ್ಲಿ ಬಿಎಸ್ ವೈ, ಆರ್ ಎಸ್ ಎಸ್ ಗುಂಪುಗಳಿವೆ. ಜೆಡಿಎಸ್ ಪಕ್ಷದಲ್ಲೂ ಗುಂಪುಗಾರಿಕೆ ಇದೆ. ಹಾಗಾಗಿ ಬಣಗಳ ಸಮಸ್ಯೆ ಇದ್ದರೆ ಹೈಕಮಾಂಡ್ ಬಗೆಹರಿಸಲಿದೆ. ನಮ್ಮಲ್ಲಿ ಗುಂಪುಗಾರಿಕೆಯಿಲ್ಲ, ಇಬ್ಬರ ಅಧೀನದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು

‘ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಪಕ್ಷ ತೊರೆಯುವುದಿಲ್ಲ. ಬಿಜೆಪಿಗೆ ಈಗ ಶಾಸಕರ ಅಗತ್ಯವಿಲ್ಲ. ಪಕ್ಷಾಂತರ ಮಾಡುವವರು ಸುಮ್ಮನೆ ಹೋಗುವುದಿಲ್ಲ. ಅವರಿಗೆ ಮತ್ತೆ ಅಧಿಕಾರ ನೀಡಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಮುಂಬರುವ ಚುನಾವಣೆಯ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಾಸನೆ ಎಲ್ಲರಿಗೂ ಸಿಕ್ಕಿದೆ' ಎಂದು ಹೇಳಿದರು.

 ಕಾಂಗ್ರೆಸ್ ಅಧಿಕಾರ ಹಿಡಿಯುವುದು ಹಗಲು ಗನಸಲ್ಲ, ವಾಸ್ತವ ಕನಸು. ಸಿದ್ಧರಾಮಯ್ಯ ಕಾಂಗ್ರೆಸ್ ತೊರೆಯಬಹುದೆಂದು ಹೇಳಿರುವ ಸಚಿವ ಬಿ.ಸಿ.ಪಾಟೀಲ್ ಗೆ ಟಾಂಗ್ ನೀಡಿದ ಸತೀಶ್ ಜಾರಕೀಹೊಳಿ, ನಮ್ಮ ಪಕ್ಷದ ಆಂತರಿಕ ವಿಚಾರ ಅವರಿಗೇಕೆ ಬೇಕು. ಬಿ.ಸಿ.ಪಾಟೀಲ್ ಎಲ್ಲಿ ಇರುತ್ತಾರೆಂಬುದನ್ನು ಮೊದಲು ನೋಡಿಕೊಳ್ಳಲಿ ಎಂದು ವಾಗ್ದಾಳಿ ಮಾಡಿದರು.

ಈ ವೇಳೆ ಶಾಸಕ ರಘು ಮೂರ್ತಿ, ಮಾಜಿ ಸಂಸದ ಚಂದ್ರಪ್ಪ, ತಾಜ್ ಪೀರ್, ಸೋಮಶೇಖರ್ ಸೇರಿದಂತೆ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News