ಹೂವು ಮಾರಾಟಕ್ಕೆ ಸಚಿವ ಸುಧಾಕರ್ ಅಡ್ಡಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2022-02-02 16:15 GMT

ಬೆಂಗಳೂರು, ಫೆ.2: ಕೋವಿಡ್-19 ನೆಪವೊಡ್ಡಿ ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(ಎಪಿಎಂಸಿ) ಹೂವು ಬೆಳೆಗಾರರಿಗೆ ಹೂವು ಮಾರಾಟಕ್ಕೆ ಅನುಮತಿ ನೀಡದಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಸಚಿವ ಡಾ.ಕೆ.ಸುಧಾಕರ್ ಅವರ ರಾಜಕೀಯ ಒತ್ತಡದಿಂದಾಗಿ ಇನ್ನೂ ಹೂ ಮಾರಾಟಕ್ಕೆ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ ತಿರುಮಲ ಫ್ಲವರ್ ಸ್ಟಾಲ್ ಮಾಲಕ ಜಿ.ಎಂ.ಶ್ರೀಧರ ಹಾಗೂ ಕರಿಗನಪಾಳ್ಯದ ರಮೇಶ್ ರೆಡ್ಡಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ನೋಟಿಸ್ ಜಾರಿ ಮಾಡಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲರು, ಕೋವಿಡ್-19 ಕಾರಣಕ್ಕಾಗಿ ಎರಡು ವರ್ಷಗಳಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವು ಮಾರಾಟಗಾರರಿಗೆ ನಿರ್ಬಂಧ ಹೇರಲಾಗಿತ್ತು. ಈಗ ನಿರ್ಬಂಧ ಸಡಿಲಿಕೆಯಾಗಿದ್ದರೂ ಸ್ಥಳೀಯ ಶಾಸಕ (ಆರೋಗ್ಯ ಸಚಿವ) ಡಾ.ಕೆ.ಸುಧಾಕರ ಅವರ ರಾಜಕೀಯ ಒತ್ತಡದಿಂದಾಗಿ ಇನ್ನೂ ಮಾರಾಟಕ್ಕೆ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. 

ಈ ಕುರಿತಂತೆ ಸರಕಾರಿ ವಕೀಲರಿಗೆ ವಿವರಣೆ ನೀಡುವಂತೆ ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಮುಂದೂಡಿತು. ಪ್ರಕರಣದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಪಿಎಂಸಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಎಪಿಎಂಸಿ ಕಾರ್ಯದರ್ಶಿ ಹಕೀಂ, ಜಿಲ್ಲಾಧಿಕಾರಿ ಹಾಗೂ ಎಸ್‌ಪಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿಯಲ್ಲಿ ಏನಿದೆ: ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗಾಗಲೇ ತರಕಾರಿ ಮತ್ತು ಆಲೂಗಡ್ಡೆ ಮಾರಾಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಹೂವು ಬೆಳೆಗಾರರಿಗೆ ಮಾತ್ರ ರಾಜಕೀಯ ಕಾರಣಗಳಿಗಾಗಿ ವ್ಯಾಪಾರ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ - ಬಿಜೆಪಿಯಲ್ಲಿ ಯಡಿಯೂರಪ್ಪ ಯುಗ ಅಂತ್ಯ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News