ಶಾಂತಿ ನೊಬೆಲ್ ಗೆ ನಾಮ ನಿರ್ದೇಶಿತರ ಪಟ್ಟಿಯಲ್ಲಿ ಹರ್ಷ್ ಮಂದರ್, ಆಲ್ಟ್ ನ್ಯೂಸ್ ಸ್ಥಾಪಕರು

Update: 2022-02-02 18:13 GMT
ಹರ್ಷ್‌ ಮಂದರ್‌ / ಮುಹಮ್ಮದ್‌ ಝುಬೈರ್‌ / ಪ್ರತೀಕ್‌ ಸಿನ್ಹಾ

ಹೊಸದಿಲ್ಲಿ: ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ್‌ ಮಂದರ್‌, ಅವರ ಅಭಿಯಾನ ಕಾರವಾನ್-ಎ-ಮೊಹಬ್ಬತ್ ಮತ್ತು ಆಲ್ಟ್‌ ನ್ಯೂಸ್‌ ನ ಸಹ ಸಂಸ್ಥಾಪಕರಾದ ಮುಹಮ್ಮದ್‌ ಝುಬೈರ್‌ ಮತ್ತು ಪ್ರತೀಕ್‌ ಸಿನ್ಹಾರನ್ನು ಶಾಂತಿ ಸಂಶೋಧನಾ ಸಂಸ್ಥೆ ಓಸ್ಲೋ (PRIO) ನೋಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ಆದರೆ ಈ ಶಿಫಾರಸು ಮಾಡಿರುವ ಪೀ ಆರ್ ಐ ಒ  ಸಂಸ್ಥೆ ನೊಬೆಲ್ ಪ್ರಶಸ್ತಿ ನೀಡುವ ನೊಬೆಲ್ ಇನ್ಸ್ಟಿ ಟ್ಯೂಟ್ ಅಥವಾ ನಾರ್ವೇಜಿಯನ್ ನೊಬೆಲ್ ಸಮಿತಿಗೆ  ಸೇರಿದ ಸಂಸ್ಥೆಯಲ್ಲ. ಇದು ಈ ಸಂಸ್ಥೆ ತನ್ನ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಮಾಡಿರುವ ಶಿಫಾರಸಿನ ಪಟ್ಟಿ ಮಾತ್ರ. ಹೆನ್ರಿಕ್‌ ಉರ್ದಾಲ್‌ ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. 

ತಾವು ನಾಮನಿರ್ದೇಶನ ಮಾಡಿರುವ ವ್ಯಕ್ತಿಗಳಿಗೆ ನೋಬೆಲ್‌ ಶಾಂತಿ ಪ್ರಶಸ್ತಿ ನೀಡುವುದರ ಕುರಿತು ಒತ್ತಿ ಹೇಳಿದ ಅವರು, "ಧಾರ್ಮಿಕ ಉಗ್ರವಾದದ ವಿರುದ್ಧದ ಹೋರಾಟ ಮತ್ತು ಅಂತರ್‌ಧರ್ಮೀಯ ಸೌಹಾರ್ದವನ್ನು ಉತ್ತೇಜಿಸುವ" ನಿಟ್ಟಿನಲ್ಲಿ ಹರ್ಷ್‌ ಮಂದರ್‌ ಹಾಗೂ ಅವರ ಅಭಿಯಾನ ಕಾರವಾನ್‌ ಎ ಮೊಹಬ್ಬತ್‌ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಹೆನ್ರಿಕ್‌ ಹೇಳಿದರು.

"ಮಹಾತ್ಮ ಗಾಂಧಿಯವರ ವ್ಯಕ್ತಿತ್ವದಿಂದ ಸಾಕಾರಗೊಂಡ ಭಾರತವು ಧಾರ್ಮಿಕ ಸಹಿಷ್ಣುತೆ ಮತ್ತು ಬಹುತ್ವದ ಹೆಮ್ಮೆಯ ಸಂಪ್ರದಾಯವನ್ನು ಹೊಂದಿದೆ. ಭಾರತವು ಸ್ವಾತಂತ್ರ್ಯವನ್ನು ಗಳಿಸಿದ 75 ವರ್ಷಗಳ ನಂತರ, ಈ ಸಂಪ್ರದಾಯವು ಇದೀಗ ಒತ್ತಡದಲ್ಲಿದೆ" ಎಂದು ತಮ್ಮ ಹೇಳಿಕೆಯಲ್ಲಿ ಅವರು ಉಲ್ಲೇಖಿಸಿದ್ದಾರೆ.

"ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರೀಯತಾವಾದಿ ಆಡಳಿತದಲ್ಲಿ, ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿ ಹೆಚ್ಚು ಕಷ್ಟಕರವಾಗಿದೆ ಮತ್ತು ದೇಶವು ಧಾರ್ಮಿಕ ಪ್ರೇರಿತ ಹಿಂಸಾಚಾರದ ಹಲವಾರು ಘಟನೆಗಳು ನಡೆದಿದೆ" ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2017 ರಲ್ಲಿ ಕಾರವಾನ್-ಎ-ಮೊಹಬ್ಬತ್ ದ್ವೇಷದ ಅಪರಾಧಗಳಿಗೆ ಬಲಿಯಾದವರನ್ನು ಬೆಂಬಲಿಸಲು ಮತ್ತು ಒಗ್ಗಟ್ಟನ್ನು ಪ್ರದರ್ಶಿಸಲು ಪ್ರಾರಂಭಿಸಲಾದ ಅಭಿಯಾನವಾಗಿದೆ. ಮಂದರ್ ಅವರು ನವದೆಹಲಿಯ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್‌ನ ನಿರ್ದೇಶಕರೂ ಆಗಿದ್ದಾರೆ. ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹರಡುವ ಸುಳ್ಳುಸುದ್ದಿಗಳನ್ನು ಬಯಲಿಗೆಳೆಯುವಲ್ಲಿ ಆಲ್ಟ್‌ ನ್ಯೂಸ್‌ ಕೂಡಾ ಮಹತ್ತರ ಪಾತ್ರ ವಹಿಸಿದೆ.

ಇದನ್ನೂ ಓದಿ: "ಆರೆಸ್ಸೆಸ್‌, ಬಿಜೆಪಿಯನ್ನು ಟೀಕಿಸಿದ್ದಕ್ಕೆ ಮೀಡಿಯಾ ಒನ್‌ ಚಾನೆಲ್‌ ಅನ್ನು ಗುರಿಪಡಿಸಲಾಯಿತು"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News