​ಉದ್ಯೋಗ ಖಾತರಿಗೆ ಕಡಿಮೆ ಹಣ ಗ್ರಾಮೀಣ ಭರವಸೆಗೆ ಕೊಳ್ಳಿ!

Update: 2022-02-02 18:08 GMT

ಮಾನ್ಯರೇ,

ಪ್ರಶ್ನೆ ಗ್ರಾಮೀಣ ಸಂಕಟದ್ದಾಗಿರಲಿಲ್ಲ. ಅದು ಒಂದು ಕಾನೂನಿನ ಮೂಲಕ ಸರಕಾರವು ಗ್ರಾಮೀಣ ಜನರಿಗೆ ಮಾಡಿದ ವಾಗ್ದಾನವಾಗಿತ್ತು. ಉದ್ಯೋಗಕ್ಕಾಗಿ ಬೇಡಿಕೆ ಇಟ್ಟಾಗ ಕೆಲಸ ಕೊಡಬೇಕಾಗಿದ್ದ ವಾಗ್ದಾನವು ಅತಿ ಕಡಿಮೆ ಹಣ ಇಡುವುದರ ಮೂಲಕ ‘ಕೆಲಸ ಕೊಟ್ಟಾಗ ಮಾಡಿ’ ಎಂಬ ನೀತಿಯಾಗಿ ಪರಿವರ್ತನೆಗೊಂಡಿದೆ.
ಗ್ರಾಮಾಭಿವೃದ್ಧಿಗೆ ಕೇಂದ್ರ ಬಜೆಟ್‌ನಲ್ಲಿ 1,35,944 ಕೋಟಿ ರೂ.ಗಳನ್ನು ಇಟ್ಟಿದ್ದರೆ ಉದ್ಯೋಗ ಖಾತರಿಗಾಗಿ 98,000 ಕೋಟಿ ರೂ. ಇಡಬೇಕೆಂದು ಅಂದಾಜು ಮಾಡಿದ್ದರೂ, ಕಳೆದ ವರ್ಷದಷ್ಟೇ, ಅಂದರೆ 73,000 ಕೋಟಿ ರೂ. ಮಾತ್ರ ಇರಿಸಿದ್ದು ಇದರಲ್ಲಿ 18,350 ಕೋಟಿ ರೂ. ಹಿಂದಿನ ವರ್ಷದ ವೇತನ ಬಾಕಿಗೆ ಹೋಗಿಬಿಡುತ್ತದೆ. ಅಂದರೆ ಈ ವರ್ಷಕ್ಕಾಗಿ ನಿಜವಾಗಿ ಇಟ್ಟ ಬಜೆಟ್ 54,650 ಕೋಟಿ ರೂ. ಮಾತ್ರ.
ಉದ್ಯೋಗ ಖಾತರಿಯನ್ನು ನಂಬಿಕೊಂಡು ಉದ್ಯೋಗ ಕೇಳಿಕೊಂಡು ಬರುವ ಜಾಬ್ ಕಾರ್ಡುಗಳ ಸಂಖ್ಯೆ 9.94 ಕೋಟಿ ಆಗಿರುವಾಗ ಈಗಿನ ಬಜೆಟ್ ಪ್ರಕಾರ ಇಷ್ಟು ಕುಟುಂಬಗಳಿಗೆ ಇಷ್ಟು ಹಣದಲ್ಲಿ ಸರಕಾರವು 334 ರೂ. ದಿನಗೂಲಿಯಂತೆ ವರ್ಷದಲ್ಲಿ 16 ದಿನಗಳ ಕೆಲಸವನ್ನು ಮಾತ್ರ ಗ್ಯಾರಂಟಿಯಾಗಿ ಕೊಡಬಲ್ಲದು.
ಇದು ಇಂದಿನ ಕತೆಯಲ್ಲ. 2015-16ರಿಂದಲೇ ಹೀಗೆ ನಡೆದುಕೊಂಡು ಬಂದಿದೆ. ಅಂದಿನಿಂದಲೂ ಉದ್ಯೋಗ ಖಾತರಿಯಲ್ಲಿ ಕೆಲಸ ಕೇಳಿಕೊಂಡು ಬರುವವರಿಗೆಲ್ಲ ಕೆಲಸ ಕೊಡುವಷ್ಟು ಸರಕಾರದ ವಾರ್ಷಿಕ ಬಜೆಟ್ ಇರಲೇ ಇಲ್ಲ. ಪ್ರತಿ ವರ್ಷವೂ ಇಟ್ಟ ಬಜೆಟ್‌ನಲ್ಲಿ ಒಂದು ಭಾಗ ಕಳೆದ ವರ್ಷದ ಬಾಕಿಗಾಗಿ ಖರ್ಚಾಗಿ ಹೋಗಿದ್ದರೆ ಉಳಿದ ಹಣದಲ್ಲಿ ಶೇ. 80-90 ಭಾಗವು ಮೊದಲ ಆರು ತಿಂಗಳಿಗೇ ಮುಗಿದುಹೋಗಿ ಕೆಲಸವು ಅರ್ಧಕ್ಕೇ ನಿಂತು ಹೋಗುತ್ತಿತ್ತು. ಬೊಕ್ಕಸದಲ್ಲಿ ಹಣವೇ ಇಲ್ಲದಿರುವಾಗ ಕೆಲಸ ಕೇಳಿಕೊಂಡು ಬಂದವರಿಗೆ ಉದ್ಯೋಗ ಕೊಡುವುದೆಲ್ಲಿಂದ?
 
ಕೊರೋನದ ಕಾರಣದಿಂದ ಕೆಲಸ ಕಳೆದುಕೊಂಡು ಹಳ್ಳಿಗೆ ಮರಳಿದ ದೇಶದ ಅನೌಪಚಾರಿಕ ಕೂಲಿಕಾರರಿಗೆಲ್ಲ ಕರೆದು ಸಂತೈಸಿದ್ದು ಉದ್ಯೋಗ ಖಾತರಿ ಯೋಜನೆಯೆಂದು ಎಲ್ಲರೂ ಬಲ್ಲರು. ಜೀವನ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡು ಬಂದ ನಿರುದ್ಯೋಗಿಗಳಿಗೆ ರೋಗಕ್ಕೆ ಲಸಿಕೆಯಂತೆ ಅದು ಕೆಲಸ ಮಾಡಿತ್ತು. 20-21ರಲ್ಲಿ ಏಳೂವರೆ ಕೋಟಿ ಕುಟುಂಬಗಳಿಂದ ಬಂದ 11 ಕೋಟಿ ಜನರಿಗೆ ಉದ್ಯೋಗ ಕೊಟ್ಟ ಪರಿಣಾಮವಾಗಿ ರೂ. 1.11 ಲಕ್ಷ ಕೋಟಿಯನ್ನು ಕೇಂದ್ರ ಸರಕಾರ ಖರ್ಚು ಮಾಡಿತು. ಆದರೆ ಮರುವರ್ಷವೇ ಆ ಸಂಕಟ ಮುಂದುವರಿದಿದ್ದರೂ ಕೂಡ ಬಜೆಟ್‌ನಲ್ಲಿ ಶೇ. 34 ಕಡಿತ ಮಾಡಲಾಗಿ ಜನರಿಗೆ ಕೇಳಿದಷ್ಟು ಕೆಲಸವೂ ಸಿಗಲಿಲ್ಲ. ಮತ್ತೆ ಸರಕಾರವು 25,000 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಕೊಡುವ ಪ್ರಸಂಗ ಬಂತು. ಸರಕಾರದಿಂದ ಇಷ್ಟು ಮಟ್ಟದ ಹಿಂಜರಿತ ಇದ್ದಾಗ್ಯೂ ಈಗ 6.74 ಕೋಟಿ ಕುಟುಂಬಗಳಿಂದ 9.75 ಕೋಟಿ ಜನರು ಈಗಾಗಲೇ ಕೆಲಸ ಮಾಡಿ ಮುಗಿಸಿದ್ದಾರೆ. ಮತ್ತೆ ಕೆಲಸ ಕೇಳುತ್ತಲೂ ಇದ್ದಾರೆ. ಉದ್ಯೋಗ ಅರಸಿ ಬರುವ ಗ್ರಾಮೀಣ ಜನರಿಗೆ ಧಾರಾಳವಾಗಿ ಕೆಲಸ ಕೊಡಬೇಕೆಂದರೆ ಕನಿಷ್ಟ 3.62 ಲಕ್ಷ ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಇರಿಸಬೇಕೆಂದು ಬಜೆಟ್ ಪೂರ್ವ ಅಂದಾಜಿನಲ್ಲಿ ತಿಳಿಸಲಾಗಿತ್ತು. ಆದರೆ ಸರಕಾರ ಈ ಲೆಕ್ಕವನ್ನು ಗೌಣ ಮಾಡುವುದರ ಮೂಲಕ ಲಕ್ಷಾಂತರ ಗ್ರಾಮೀಣ ಜನರ ಮೂಲಭೂತ ಜೀವನಾವಶ್ಯಕತೆಯಾದ ಉದ್ಯೋಗವನ್ನೇ ನಿರಾಕರಿಸುತ್ತಿದೆ. ಸ್ಥಳೀಯ ಉದ್ಯೋಗದ ಭರವಸೆಯನ್ನೇ ಕಿತ್ತು ಹಾಕಿದೆ.
 

Writer - -ಶಾರದಾ ಗೋಪಾಲ, ಧಾರವಾಡ

contributor

Editor - -ಶಾರದಾ ಗೋಪಾಲ, ಧಾರವಾಡ

contributor

Similar News