ಶಾಲೆಗಳಿರುವುದು ಧರ್ಮದ ಆಚರಣೆಗಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-02-03 11:54 GMT

ಬೆಂಗಳೂರು, ಫೆ. 3: `ಶಾಲೆ-ಕಾಲೇಜುಗಳಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್(ಸ್ಕಾರ್ಫ್) ಅನ್ನು ಧರಿಸಿಕೊಂಡು ಬರಬಾರದು. ಶಾಲೆಗಳಿರುವುದು ಧರ್ಮದ ಆಚರಣೆಗಾಗಿ ಅಲ್ಲ. ಶಾಲೆಗಳಿರುವುದು ಕಲಿಕೆಗಾಗಿ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆಯ ನೂತನ ವಾಹನಗಳ ಲೋಕಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, `ಪಾರ್ಥನೆ ಮಾಡುವುದಕ್ಕೆ ದೇವಸ್ಥಾನ, ಚರ್ಚ್, ಮಸೀದಿಗಳಿವೆ. ಆಯಾ ಶಾಲಾ ಆಡಳಿತ ಮಂಡಳಿ ಇದನ್ನು ಪಾಲಿಸಬೇಕು. ಶಾಲೆಯಲ್ಲಿ ನಾವೆಲ್ಲ ಭಾರತ ಮಾತೆಯ ಮಕ್ಕಳು ಎನ್ನೋ ಭಾವನೆ ಇರಬೇಕು. ಹೀಗಾಗಿ, ಹಿಜಾಬ್(ಸ್ಕಾರ್ಫ್) ಧರಿಸಲು ಅವಕಾಶ ಇಲ್ಲ ಎಂದು ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟಪಡಿಸಿದ್ದಾರೆ ಎಂದರು.

ಹಿಜಾಬ್ ವಿಚಾರದಲ್ಲಿ ಗೊಂದಲ ಮಾಡುವ ಕೆಲ ಸಂಘಟನೆ ಮೇಲೆ ನಿಗಾ ಇಟ್ಟಿದ್ದೇವೆ. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರ ಕಲಿಯಬೇಕು. ದೇಶದ ಐಕ್ಯತೆ ಬಗ್ಗೆ ಶಾಲೆಯಲ್ಲಿ ಸಂಸ್ಕಾರ ಪಡೆಯದಿದ್ದರೆ ಹೇಗಾಗುತ್ತದೆ? ಎಲ್ಲರೂ ಯೋಚನೆ ಮಾಡಬೇಕು. ಹಿಜಾಬ್ ಹಿಂದೆ ಇರುವ ಮತೀಯ ಸಂಘಟನೆಗಳ ಬಗ್ಗೆ ಗಮನ ಕೊಡಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

`ಯಾವುದೇ ಧರ್ಮದವರು ಅವರವರ ಧರ್ಮದ ಆಚರಣೆ ಮಾಡಲು ಶಾಲೆಗೆ ಬರುವುದಲ್ಲ. ಎಲ್ಲರೂ ಸೇರಿ ಭಾರತ ಮಾತೆಯ ಮಕ್ಕಳು ಎಂದು ವ್ಯಾಸಂಗಕ್ಕೆ ಬರಬೇಕು. ಶಾಲೆ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಬಾರದು, ಹಸಿರು ಶಾಲು, ಕೇಸರಿ ಶಾಲು ಧರಿಸಬಾರದು. ಶಾಲಾ ಆಡಳಿತ ಮಂಡಳಿ ಹೇಳುವ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News