ಪುರಾತನ ವಿಗ್ರಹಗಳ ಕಳವು ಪ್ರಕರಣ: ಪೊಲೀಸ್ ಸಿಬ್ಬಂದಿ, ಬಿಜೆಪಿ ಪದಾಧಿಕಾರಿ ಸೇರಿ 4 ಮಂದಿಯ ಬಂಧನ

Update: 2022-02-03 12:11 GMT
ಸಾಂದರ್ಭಿಕ ಚಿತ್ರ

ಚೆನ್ನೈ: ರಾಮನಾಥಪುರಂನಲ್ಲಿ ಪುರಾತನ ವಿಗ್ರಹಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಬಿಜೆಪಿ ಪದಾಧಿಕಾರಿ ಸೇರಿದಂತೆ ನಾಲ್ಕು ಮಂದಿ ಆರೋಪಿಗಳನ್ನು ತಮಿಳುನಾಡು ವಿಗ್ರಹಗಳ ರಕ್ಷಣಾ ಘಟಕದ ಪೊಲೀಸರು ಬಂಧಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ರಾಮನಾಥಪುರಂನ ಬಿಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಅಲೆಕ್ಸಾಂಡರ್ (52) ಎಂಬಾತ ಪುರಾತನ ವಿಗ್ರಹಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದಾನೆಂಬ ಖಚಿತ ಮಾಹಿತಿಯನ್ನು ಪೊಲೀಸರು ಪಡೆಯುತ್ತಿದ್ದಂತೆಯೇ ವಿಗ್ರಹಗಳ ರಕ್ಷಣಾ ಘಟಕದ ಎಡಿಜಿಪಿ ಜಯಂತ್ ಮುರಳಿ ಅವರ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು.

ಅಲೆಕ್ಸಾಂಡರ್‍ನನ್ನು ಫೆಬ್ರವರಿ 2ರಂದು ಬಂಧಿಸಲಾಗಿತ್ತು.  ತನಗೆ ಅರುಪ್ಪುಕೊಟೈ ಠಾಣೆಯ ಹೆಡ್‍ಕಾನ್‍ಸ್ಟೇಬಲ್  ಇಲನ್‍ಕುಮಾರನ್ (44) ಹಾಗೂ ವಿರುದ್ಧುನಗರದ ಕೂರೈಕುಂಡು ಎಂಬಲ್ಲಿನ ಕರುಪ್ಪುಸ್ವಾಮಿ (35) ಎಂಬಾತ ಏಳು ವಿಗ್ರಹಗಳನ್ನು ನೀಡಿದ್ದಾನೆಂದು  ಅಲೆಕ್ಸಾಂಡರ್ ವಿಚಾರಣೆ ವೇಳೆ ಬಹಿರಂಗಗೊಳಿಸಿದ್ದ. ಅವರನ್ನೂ ಬಂಧಿಸಿದ ನಂತರ ವಿಚಾರಣೆಗೊಳಪಡಿಸಿದಾಗ ತಮಗೆ ಮತ್ತು ತಮ್ಮ ಸಹವರ್ತಿಗಳಿಗೆ ಸೇಲಂನ ಎಡಪ್ಪಾಡಿ ಎಂಬಲ್ಲಿ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ದೊರಕಿತ್ತು ಹಾಗೂ ಅಲ್ಲಿಗೆ ವಿಗ್ರಹ ರಕ್ಷಣೆ ಘಟಕದ ಪೊಲೀಸರ ಸೋಗಿನಲ್ಲಿ ತೆರಳಿ ವಿಗ್ರಹಗಳನ್ನು ವಶಪಡಿಸಿ ಅವುಗಳನ್ನು ರೂ. 5 ಕೋಟಿಗೆ ಮಾರಾಟ ಮಾಡಲು ಅಲೆಕ್ಸಾಂಡರ್ ಗೆ ನೀಡಿದ್ದಾಗಿ ತಿಳಿಸಿದ್ದಾರೆ.

ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿರುವ ಪೊಲೀಸರು ಇನ್ನೂ ಇಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ. ಯಾವ ದೇವಸ್ಥಾನಗಳಿಂದ ಈ ವಿಗ್ರಹಗಳನ್ನು ಕಳ್ಳತನಗೈಯ್ಯಲಾಗಿದೆ ಎಂಬ ಕುರಿತೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಶಾಲೆಗಳಿರುವುದು ಧರ್ಮದ ಆಚರಣೆಗಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News