ಹಿಜಾಬ್ ವಿವಾದ: ಕರ್ನಾಟಕವನ್ನು ತಾಲಿಬಾನ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದ ಸಚಿವ ಸುನೀಲ್ ಕುಮಾರ್

Update: 2022-02-04 12:40 GMT

ಬೆಂಗಳೂರು, ಫೆ. 4: `ಹಿಜಾಬ್(ಸ್ಕಾರ್ಫ್)ಗೆ ಮಾತ್ರ ಮೂಲಭೂತ ಹಕ್ಕು ಎಂದು ಹೇಳುವುದು ನೋಡಿದರೆ, ನಿಮ್ಮ ರಾಜಕೀಯ ನಡೆ ಹಾಗೂ ದುರುದ್ದೇಶ ಏನೆಂಬುದು ಸ್ಪಷ್ಟವಾಗುತ್ತಿದೆ' ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್ ಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಆಯುಧಪೂಜೆ ಪ್ರಯುಕ್ತ  ಪೊಲೀಸ್ ಸಿಬ್ಬಂದಿಗಳು ಠಾಣೆಯಲ್ಲಿ ಪೂಜೆ ಮಾಡಿ, ಹಬ್ಬದ ಸಂಭ್ರಮದ ಸಮವಸ್ತ್ರಧರಿಸಿ ಫೋಟೋ ತೆಗೆಸಿಕೊಂಡಾಗ, ಅದರಲ್ಲಿ ಕೇಸರಿ ಭಯೋತ್ಪಾದನೆ ಹುಡುಕುವ ನೀವು, ಹಿಜಾಬ್‍ಗೆ ಮಾತ್ರ ಮೂಲಭೂತ ಹಕ್ಕು ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

`ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿತ್ತಿದ ಜಾತಿ ವಿಷ ಬೀಜದ ಮುಂದುವರಿದ ಭಾಗವೇ `ಹಿಜಾಬ್' ಘರ್ಷಣೆ, ಕರ್ನಾಟಕವನ್ನು ತಾಲಿಬಾನ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ಬೇಕು ಎಂಬ ಅಭಿಪ್ರಾಯವಿದೆ. ತಮಗೆ ಖುಷಿ ಬಂದಾಗ ಒಬ್ಬೊಬ್ಬರು ಒಂದೊಂದು ವಸ್ತ್ರ ಧರಿಸಿಕೊಂಡು ಬರುವುದು ಸರಿಯಲ್ಲ' ಎಂದು ಅವರು ತಿಳಿಸಿದರು.

`ಧರ್ಮದ ಕಾರಣಕ್ಕೆ ಮತೀಯವಾದದ ಕಾರಣಕ್ಕೆ ಹೀಗೆ ವಸ್ತ್ರ ಹಾಕಿಕೊಂಡು ಬರುವುದನ್ನ ಸಹಿಸಲು ಸಾಧ್ಯವಿಲ್ಲ. ಕರ್ನಾಟಕ, ಉಡುಪಿ, ಮಂಗಳೂರು ಜಿಲ್ಲೆಯನ್ನ ತಾಲಿಬಾನ್ ಮಾಡಲು ಬಿಡುವುದಿಲ್ಲ ಎಂದು ಗುಡುಗಿದ ಸುನೀಲ್ ಕುಮಾರ್, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಯಮ ಮಾಡಲು ಸಮಿತಿ ರಚನೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದರು.

`ಶಾಲೆಯ ಶುಲ್ಕ ಪಾವತಿಸಲು ಕಷ್ಟ ಎಂದು ಒಂದು ವರ್ಗ ಹೇಳಿದರೆ, ವಿದ್ಯಾರ್ಥಿಗಳು ಕೋರ್ಟ್‍ಗೆ ಹೋಗಿದ್ದಾರೆಂದರೆ ಇದರ ಹಿಂದೆ ಯಾರಿದ್ದಾರೆಂಬುದು ಸ್ಪಷ್ಟ. ಶಿಕ್ಷಣದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು. ಸಿದ್ದರಾಮಯ್ಯ, ಖಾದರ್ ಯಾವಾಗಲು ಮತೀಯವಾಗಿಯೇ ಆಲೋಚನೆ ಮಾಡುತ್ತಾರೆ' ಎಂದು ಸುನೀಲ್ ಕುಮಾರ್ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News