ಕಾರವಾರ: ದರ್ಗಾದ ಗೋಡೆ, ಸಮಾಧಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು

Update: 2022-02-04 13:25 GMT
 ಕಿಡಿಗೇಡಿಗಳಿಂದ ಧ್ವಂಸಕ್ಕೊಳಗಾದ ದರ್ಗಾದ ಗೋಡೆ

ಕಾರವಾರ: ತಾಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಜನ ಪ್ರದೇಶದಲ್ಲಿದ್ದ ದರ್ಗಾದ ಗೋಡೆ ಹಾಗೂ ಸಮಾಧಿಯನ್ನು ಕಿಡಿಗೇಡಿಗಳು ನೆಲಸಮ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಕಣಸಗಿರಿ ಬಂದರುವಾಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಸಯ್ಯದ್ ಮಾಲ್ದಾರ್ ನೂರ್ ದರ್ಗಾದ ಗೋಡೆಗಳನ್ನು ಕೆಡವಲಾಗಿದೆ ಎಂದು ತಿಳಿದುಬಂದಿದೆ. ಫೆಬ್ರುವರಿ 1ರಂದು ಹಾರುನ್ ಶೇಖ್ ಎಂಬವರು ಸಯ್ಯದ್ ಮಾಲ್ದಾರ್ ನೂರ್ ದರ್ಗಾಕ್ಕೆ ಬಂದು ಅಲ್ಲಿಯ ಆವರಣವನ್ನು ಸ್ವಚ್ಛಗೊಳಿಸಿ ಹೋಗಿದ್ದರು. ಬಳಿಕ ದರ್ಗಾಕ್ಕೆ ಯಾರೂ ಭೇಟಿ ನೀಡರಲಿಲ್ಲ.

ಫೆ.2ರಂದು ಕಿಡಿಗೇಡಿಗಳು ಈ ಕತ್ಯ ಎಸಗಿಸಬಹುದು ಎಂದು ಶಂಕಿಸಲಾಗಿದೆ. ಗುರುವಾರ ಬೆಳಿಗ್ಗೆ ಈ ಘಟನೆ ನೋಡಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಪೆನ್ನೇಕರ್ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಕಿಡಿಗೇಡಿಗಳ ಪತ್ತೆಗೆ ಡಿಎಸ್‌ಪಿ ನೇತೃತ್ವದಲ್ಲಿ ನಾಲ್ಕು ತಂಡ ರಚನೆ

ದರ್ಗಾದ ಗೋಡೆ ಮತ್ತು ಮಜರ್‌ಗಳನ್ನು ಕಿಡಿಗೇಡಿಗಳು ದುರುದ್ದೇಶ ಪೂರ್ವಕವಾಗಿ ಅಥವಾ ಜಾಗವನ್ನು ಕಬಳಿಸುವ ಉದ್ದೇಶದಿಂದ ಕೆಡವಿ, ಧ್ವಂಸಗೊಳಿಸಿದ್ದಾರೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ, ಡಿಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ಮಾಹಿತಿ ಕಲೆ ಹಾಕಲಾಗುತ್ತಿದೆ. ಜಾಗಕ್ಕೆ ಸಂಬಂಧಿಸಿದಂತೆಯೂ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ದುಷ್ಕೃತ್ಯದಲ್ಲಿ ಭಾಗಿಯಾದವರನ್ನು ಶೀಘ್ರದಲ್ಲೇ ಬಂಧಿಸಿ, ತನಿಖೆ ನಡೆಸಲಾಗುವುದು 

- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ- ಸುಮನ್ ಡಿ. ಪೆನ್ನೆಕರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News