ಸೀಡಿ ಪ್ರಕರಣ: ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದ ಎಸ್‍ಐಟಿ

Update: 2022-02-04 13:19 GMT

ಬೆಂಗಳೂರು, ಫೆ.4: ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಬಹಿರಂಗ ಪ್ರಕರಣದ ಆರೋಪಿಗೆ ಎಸ್‍ಐಟಿ ತಂಡ ಕ್ಲೀನ್ ಚೀಟ್ ನೀಡಿದೆ. ಸಾಕ್ಷ್ಯಾಧಾರ ಕೊರತೆ ಹಾಗೂ ಮಾಜಿ ಸಚಿವರ ಪಾತ್ರ ಕಂಡುಬರದ ಹಿನ್ನೆಲೆ 1ನೆ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.

ಅತ್ಯಾಚಾರ ಎಸಗಿರುವುದಾಗಿ ಯುವತಿ ನೀಡಿದ್ದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ಲೀ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಗೆ ಎಸ್‍ಐಟಿ ಕ್ಲೀನ್ ಚಿಟ್ ನೀಡಿದೆ. 

ಎಸ್‍ಐಟಿ ಒಟ್ಟು 150 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ಹಲವು ವಿಚಾರಗಳನ್ನು ತಿಳಿಸಿದೆ. ಕಳೆದ ವರ್ಷ ಸೀಡಿ ಬಹಿರಂಗಗೊಂಡ ಹಿನ್ನೆಲೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಚಾರ್ಜ್‍ಶೀಟ್‍ನಲ್ಲಿರುವ ಅಂಶಗಳು: ಇಬ್ಬರ ನಡುವೆ ಒಮ್ಮತದಿಂದ ಲೈಂಗಿಕ ಕ್ರಿಯೆ ನಡೆದಿದೆ. ಯುವತಿ ಮತ್ತು ರಮೇಶ್ ಜಾರಕಿಹೊಳಿ ಮಾತನಾಡಿರುವ ಆಡಿಯೋದಲ್ಲಿ ಸಹಜವಾಗಿ ಮಾತಾಡಿರೋದು ಕಂಡು ಬಂದಿದೆ. 

ಬಿಡುಗಡೆಗೊಂಡ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಪ್ರಕರಣದಲ್ಲಿ ಕೇಳಿ ಬಂದಿರುವ ಆರೋಪಿಗಳು ಬ್ಲ್ಯಾಕ್ ಆಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿರೋದು ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಕರಣವೇನು: ಯುವತಿಯೊಬ್ಬಳಿಗೆ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ಸಚಿವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪದ ಸೀಡಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. 

ಈ ಆರೋಪದ ಹಿನ್ನೆಲೆಯಲ್ಲಿ, 2021ರ ಮಾ.3ರಂದು ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಮುಜುಗರ ತಪ್ಪಿಸಲು ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪಗೆ ರಾಜೀನಾಮೆ ಪತ್ರ ರವಾನೆ ಮಾಡಿ ತಮ್ಮ ನಿಲುವನ್ನು ತಿಳಿಸಿದ್ದರು. ಯಡಿಯೂರಪ್ಪ ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರವನ್ನು ಆಗ ರಾಜ್ಯಪಾಲರಾಗಿದ್ದ ವಿ.ಆರ್.ವಾಲಾ ಅವರಿಗೆ ಕಳುಹಿಸಿದ್ದರು. ವಾಲಾ, ರಮೇಶ್ ಜಾರಕಿಹೊಳಿ ರಾಜೀನಾಮೆಯನ್ನು ಅಂಗೀಕರಿಸಿದ್ದರು.

ಇದಾದ ಬಳಿಕ ಸರಕಾರ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿತ್ತು. ಅತ್ತ ಸಂತ್ರಸ್ತ ಯುವತಿ ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News