ಹಿಜಾಬ್ ವಿವಾದ: ಇದು ಬಹಿರಂಗ ಚರ್ಚೆ ಮಾಡುವ ವಿಚಾರವಲ್ಲ ಎಂದ ಡಿ.ಕೆ ಶಿವಕುಮಾರ್

Update: 2022-02-04 14:05 GMT
ಡಿ.ಕೆ ಶಿವಕುಮಾರ್

ಬೆಂಗಳೂರು: ಹಿಜಾಬ್  ವಿಚಾರವಾಗಿ ನಾನು ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಬೇಕಾಗಿದೆ. ಮೊದಲಿನಿಂದ ಆಚರಿಸಿಕೊಂಡು ಬಂದ ಪದ್ಧತಿ, ಸಂಸ್ಕೃತಿ, ಇತಿಹಾಸ, ಕಾನೂನು ಎಲ್ಲವನ್ನೂ ಚರ್ಚಿಸಬೇಕಾಗಿದೆ. ನ್ಯಾಯಾಲಯ ಈಗಾಗಲೇ ಮಧ್ಯ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ನಾನು ಪಕ್ಷದ ಅಧ್ಯಕ್ಷನಾಗಿ ಮಾತನಾಡುವುದು ಸರಿಯಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ವಾಯವ್ಯ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

''ಎಲ್ಲರಿಗೂ ಅವರದೇ ಆದ ಜೀವನ ಪದ್ಧತಿ, ಸಂಸ್ಕೃತಿ ಇರುವುದನ್ನು ಚರ್ಚಿಸಬೇಕಿದೆ. ಇದು ಬಹಿರಂಗ ಚರ್ಚೆ ಮಾಡುವ ವಿಚಾರವಲ್ಲ. ಮಕ್ಕಳು, ಧಾರ್ಮಿಕ ಆಚರಣೆಯಂತಹ ಸೂಕ್ಷ್ಮ ವಿಚಾರವಿರುವುದರಿಂದ ಈ ಬಗ್ಗೆ ಒಂದು ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕಿದೆ ಎಂದು''  ಹೇಳಿದರು.

''ಬೆಳಗಾವಿ, ಬಾಗಲಕೋಟೆ, ಬಾದಾಮಿ, ಬಿಜಾಪುರದ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದ ತಲಾ ಒಬ್ಬರು ಅಭ್ಯರ್ಥಿ ಆಯ್ಕೆ ಸಂಬಂಧ ನಾಯಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪದವೀಧರ ಕ್ಷೇತ್ರಕ್ಕೆ ಆರು ಮಂದಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 15ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ'' ಎಂದು ಅವರು ಹೇಳಿದರು.

ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿರುವ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯುವುದು ಮುಖ್ಯ. ಇಂದಿನ ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕೆಲವು ನಾಯಕರು ಗೋವಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದು, ಮುಂದಿನ ಕೆಲ ದಿನಗಳಲ್ಲಿ ಅವರು ಬಂದ ನಂತರ ಚರ್ಚಿಸಿ, ನಮ್ಮ ಶಿಫಾರಸ್ಸನ್ನು ದಿಲ್ಲಿಗೆ ಕಳುಹಿಸಿಕೊಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಸಭೆಯಲ್ಲಿ ವಿರಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಮ್ ಅಹ್ಮದ್, ಧೃವನಾರಾಯಣ್ ಹಾಗೂ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News