ಮುಖ್ಯಮಂತ್ರಿಯಾಗುವ ಹುಚ್ಚು ಕುಮಾರಸ್ವಾಮಿಗೆ ಇಲ್ಲವೇ: ಶಾಸಕ ಝಮೀರ್ ಅಹ್ಮದ್ ಖಾನ್ ಪ್ರಶ್ನೆ

Update: 2022-02-06 17:03 GMT

ಬೆಂಗಳೂರು, ಫೆ. 6: `ಮುಖ್ಯಮಂತ್ರಿಯಾಗಬೇಕೆಂಬ ಹುಚ್ಚು ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಇಲ್ಲವೇ? ಅವರೇನು ಸಮಾಜ ಸೇವೆ ಮಾಡಬೇಕೆಂದು ರಾಜಕೀಯದಲ್ಲಿ ಇದ್ದಾರಾ? ಅವರಿಗೂ ಮುಖ್ಯಮಂತ್ರಿಯಾಗಬೇಕು ಎಂಬ ಹುಚ್ಚು ಇದೆ ಎಂದು ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಟೀಕಿಸಿದ್ದಾರೆ.

ರವಿವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಸಿಎಂ ಆಗಬೇಕು ಎಂಬ ಹುಚ್ಚು ಇದೆ ಎಂದು ಕುಮಾರಸ್ವಾಮಿ ನಿನ್ನೆ ನೀಡಿದ್ದ ಹೇಳಿಕೆಗೆ ಅವರು ಈ ಮೇಲಿನಂತೆ ತಿರುಗೇಟು ನೀಡಿದರು.

`ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೂರನೆ ಸ್ಥಾನಕ್ಕೆ ಬರಲಿದೆ' ಎಂದು ಸಿ.ಎಂ.ಇಬ್ರಾಹೀಂ ನೀಡಿರುವ ಹೇಳಿಕೆಗೂ ತಿರುಗೇಟು ನೀಡಿದ ಝಮೀರ್ ಅಹ್ಮದ್, `ಯಾರು ಯಾವ ಸ್ಥಾನಕ್ಕೆ ಬರುತ್ತಾರೆ ಅನ್ನೋದನ್ನು ಚುನಾವಣೆ ವೇಳೆ ಮತದಾರರು ನಿರ್ಧರಿಸುತ್ತಾರೆಯೇ ಹೊರತು, ಬೇರೆಯವರಲ್ಲ' ಎಂದರು.

`ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕನ ಸ್ಥಾನ ಈ ಬಾರಿ ಅಲ್ಪಸಂಖ್ಯಾತರಿಗೆ ನೀಡಬೇಕಿತ್ತು. ಈ ಬಗ್ಗೆ ನಾವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಇದಕ್ಕಾಗಿ ನಮಗೂ ನೋವಿದೆ. ಹೈಕಮಾಂಡ್ ಈಗಾಗಲೆ ತೀರ್ಮಾನ ಮಾಡಿರುವುದರಿಂದ ನಾವು ಪಕ್ಷದ ಆದೇಶಕ್ಕೆ ಗೌರವ ನೀಡಬೇಕು' ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

`ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಆದುದರಿಂದ, ಸಿ.ಎಂ.ಇಬ್ರಾಹೀಂ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದಷ್ಟು ಶೀಘ್ರವೇ ನಾನು ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಇಬ್ರಾಹೀಂ ಅವರು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಈಗಾಗಲೆ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ' ಎಂದು ಅವರು ಭರವಸೆಯಿಂದ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News