"ಸರಕಾರ ನೀಡುತ್ತಿರುವ ಝೆಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸಿ": ಉವೈಸಿಗೆ ಮನವಿ ಮಾಡಿದ ಅಮಿತ್ ಶಾ

Update: 2022-02-07 19:06 GMT

ಹೊಸದಿಲ್ಲಿ, ಫೆ. 7: ಎಐಎಂಐಎಂ ವರಿಷ್ಠ ಹಾಗೂ ಲೋಕಸಭಾ ಸಂಸದ ಅಸದುದ್ದೀನ್ ಉವೈಸಿ ಅವರು ಕೇಂದ್ರ ಸರಕಾರದ ‘ಝಡ್’ ಶ್ರೇಣಿಯ ಭದ್ರತೆ ಒಪ್ಪಿಕೊಳ್ಳುವಂತೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.
 
ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಉವೈಸಿ ಅವರು ಫೆ. 3ರಂದು ಹಿಂದಿರುಗುತ್ತಿದ್ದಾಗ ಅವರ ಬೆಂಗಾವಲು ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅವರಿಗೆ ‘ಝಡ್’ ಶ್ರೇಣಿಯ ಭದ್ರತೆ ಒದಿಗಿಸಿತ್ತು. ಆದರೆ, ಅವರು ಅದನ್ನು ಸ್ವೀಕರಿಸಿರಲಿಲ್ಲ. ‌

‘‘ಉವೈಸಿ ಅವರ ಭದ್ರತೆಗೆ ಅಪಾಯ ಇದೆ. ಆದುದರಿಂದ ಕೇಂದ್ರ ಸರಕಾರ ಅವರಿಗೆ ಝಡ್ ಶ್ರೇಣಿಯ ಭದ್ರತೆ (ಗುಂಡು ನಿರೋಧಕ ದೊಂದಿಗೆ)ನೀಡಲು ನಿರ್ಧರಿಸಿದೆ. ಆದರೆ, ಉವೈಸಿ ಅವರು ನಿರಾಕರಿಸಿದ್ದಾರೆ. ಅವರು ಈ ಝಡ್ ಶ್ರೇಣಿಯ ಭದ್ರತೆಯನ್ನು ಸ್ವೀಕರಿಸುವಂತೆ ವಿನಂತಿಸುತ್ತಿದ್ದೇನೆ’’ ಎಂದು ಅಮಿತ್ ಶಾ ಅವರು ಹೇಳಿದ್ದಾರೆ. 

‘‘ಮೋಟಾರು ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಉವೈಸಿ ಅವರ ಬೆಂಗಾವಲು ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ. ಉವೈಸಿ ಅವರು ಸುರಕ್ಷಿತವಾಗಿ ಕಾರಿನಿಂದ ಹೊರಬಂದಿದ್ದಾರೆ. ಮೂರು ಗುಂಡುಗಳು ಅವರು ವಾಹನದ ಕೆಳಗಿನ ಭಾಗಕ್ಕೆ ತಗುಲಿದ ಗುರುತುಗಳು ಕಂಡು ಬಂದಿವೆ.

"ಈ ಘಟನೆಗೆ ಮೂರು ಮಂದಿ ಸಾಕ್ಷಿಗಳಾಗಿದ್ದಾರೆ. ಅಲ್ಲದೆ, ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆೆ’’ ಎಂದು ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಇದುವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ಎರಡು ಪಿಸ್ತೂಲ್‌ಗಳು ಪತ್ತೆಯಾಗಿವೆ. ಅಲ್ಲದೆ, ಮಾರುತಿ ಆಲ್ಟೊ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಮಿತ್ ಶಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News