''ಗೃಹ ಮಂತ್ರಿ ಮಾಡಿದ್ದರೆ, ಈ ಕೂಡಲೆ ಸಮವಸ್ತ್ರದ ಸಮಸ್ಯೆ ಬಗೆಹರಿಸುತ್ತಿದ್ದೆ'': ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2022-02-07 15:22 GMT

ವಿಜಯಪುರ, ಫೆ. 7: `ನನಗೆ ಗೃಹ ಖಾತೆ ನೀಡಿದರೆ ಹಿಜಾಬ್(ಸ್ಕಾರ್ಫ್) ಮತ್ತು ಕೇಸರಿ ಶಾಲು ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತೇನೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಮವಸ್ತ್ರದ ಬಗ್ಗೆ ಬಗ್ಗೆ ಹೈಕೋರ್ಟ್ ನೀಡುವ ತೀರ್ಪಿಗೆ ನಾವು ಬದ್ಧ. ಈ ದೇಶದಲ್ಲಿರುವ ಎಲ್ಲರೂ ಹೈಕೋರ್ಟ್ ತೀರ್ಪಿಗೆ ಬದ್ಧರಾಗಿರಬೇಕಾಗುತ್ತದೆ. ಆದರೆ, ಇಲ್ಲಿ ವಾಸಿಸಲು ಯೋಗ್ಯರಲ್ಲ ಎನ್ನುವವರು ಪಾಕಿಸ್ತಾನಕ್ಕಾದರೂ ಹೋಗಲಿ, ಜನ್ನತ್‍ಗಾದರೂ ಹೋಗಲಿ. ಇದು ಒಳ್ಳೆಯ ಮುಸ್ಲಿಮರ ಬಗ್ಗೆ ಅಲ್ಲ' ಎಂದು ಹೇಳಿದರು.

`ಯಾವುದೇ ಒಂದು ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಿರುವುದು ಸತ್ಯ. ಇದು ಕ್ರಿಯೆಗೆ ಪ್ರತಿಕ್ರಿಯೆಯಾಗಿದೆ. ಇದು ಶಾಲೆಗಳ ಸಮವಸ್ತ್ರದ ವಿಚಾರ. ನಿಯಮ ಉಲ್ಲಂಘಿಸಿ ನಮ್ಮ ಧರ್ಮ ಹೀಗೆ ಹೇಳುತ್ತದೆ ಎಂದು ಹೇಳಬಾರದು. ಜಾತ್ಯತೀತ ರಾಷ್ಟ್ರ ಎಂದು ನಾವು ಹೇಳುತ್ತೇವೆ. ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ' ಎಂದು ಯತ್ನಾಳ್ ಗುಡುಗಿದರು.

`ಏಕೆ ಕೇಸರಿ ಶಾಲು ಹಾಕಿಕೊಳ್ಳಬಾರದು. ನಾವೇಕೆ ಕೇಸರಿ ತಿಲಕ ಹಾಕಿಕೊಳ್ಳಬಾರದು. ಸಿದ್ದರಾಮಯ್ಯ ಅವರಂತಹ ಬೇಜವಾಬ್ದಾರಿ ನಾಗರಿಕರು ಈ ದೇಶದಲ್ಲಿ ಇಲ್ಲ. ಸಿದ್ದರಾಮಯ್ಯ ತಿಲಕ ಹಚ್ಚಿಕೊಳ್ಳುವುದಿಲ್ಲ. ಹಾಲುಮತದವರು ಪೇಟ ಸುತ್ತಲು ಬಂದರೆ ಕಿತ್ತೆಸೆಯುತ್ತಾರೆ. ಆದರೆ, ಅದೇ ಟಿಪ್ಪು ಸುಲ್ತಾನ್ ಟೋಪಿ ಹಾಕಿಕೊಳ್ಳಲು ಇವರಿಗೆ ಬರುತ್ತೆ. ಆದರೆ ಅದೇ ಬೀರಪ್ಪ ದೇವರ ಪೇಟ ಸುತ್ತಿಕೊಳ್ಳಲು ಅವರಿಗೆ ನಾಚಿಕೆ ಬರುತ್ತೆ. ಇದು ಎಂತಹ ಜಾತ್ಯತೀತತೆ?' ಎಂದು ಯತ್ನಾಳ್ ಪ್ರಶ್ನಿಸಿದರು.

`ದೇಶದಲ್ಲಿ ಕಾಂಗ್ರೆಸ್ ನಾಶವಾಗುತ್ತಿದ್ದು, ಆ ಪಕ್ಷ ಕಾಂಗ್ರೆಸ್ ಪಾಕಿಸ್ತಾನ ಪಾರ್ಟಿ ಆಗುತ್ತಿದೆ. ಕಾಂಗ್ರೆಸ್ಸಿಗೆ ನಮ್ಮ ಬಗ್ಗೆ ಕಾಳಜಿ ಇಲ್ಲ. ದೇಶದ ಬಗ್ಗೆ ಅಭಿಮಾನವಿಲ್ಲ. ರಾಹುಲ್ ಗಾಂಧಿ ಅವರು ಚೀನಾ ಮತ್ತು ಪಾಕಿಸ್ತಾನ ಏಜೆಂಟರಂತೆ ಮಾತನಾಡುತ್ತಾರೆ. ಇದು ನಮ್ಮ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಕೇಸರು ಶಾಲು ಧರಿಸಿಕೊಂಡು ಹೋಗುತ್ತಿದ್ದಾರೆ ಎಂದು ಯತ್ನಾಳ್ ಇದೇ ವೇಳೆ ಸಮರ್ಥನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News