ಹಿಜಾಬ್, ಕೇಸರಿ ಶಾಲಿಗಿಂತ ಶಿಕ್ಷಣ ದೊಡ್ಡದು: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

Update: 2022-02-09 17:47 GMT

ಮೈಸೂರು,ಫೆ.9: ಹಿಜಾಬ್-ಕೇಸರಿ ಶಾಲು ಧರಿಸುವ ವಿಚಾರದಲ್ಲಿ ಕಲ್ಲು ತೂರಿ ಗಲಾಟೆ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವುದನ್ನು ಬಿಟ್ಟು ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟಿದ್ದು ತಪ್ಪು ಎಂದು ವಿಧಾನಪರಿಷತ್ ಸದಸ್ಯ  ಎಚ್.ವಿಶ್ವನಾಥ್ ಸರ್ಕಾರದ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಡಿದ ಅವರು,  ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಕ್ಕಳನ್ನು ಜಾತಿ, ಧರ್ಮದ ಹೆಸರಿನಲ್ಲಿ ಪ್ರತ್ಯೇಕಿಸಿ ಅವರ ಮನಸ್ಸನ್ನು ಕದಡಬಾರದು. ಮಂಡ್ಯದ ಕಾಲೇಜಿನಲ್ಲಿ ಗಲಾಟೆ ಆಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಿದ್ದಾರೆ? ಗಲಾಟೆ ಆಗುತ್ತಿದ್ದರೂ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಾಲೇಜು ವಾತಾವರಣ ಚೆನ್ನಾಗಿದ್ದರಿಂದ ಮಕ್ಕಳ ಕಲಿಕೆಗೆ ಪೂರಕವಾಗಿರುತ್ತದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಅದನ್ನು ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದೆ. ಹಿಂದೂ ಕೋಮುವಾದ, ಮುಸ್ಲಿಂ ಮತೀಯವಾದ ಎರಡೂ ವಿಜೃಂಭಿಸುತ್ತಿವೆ. ಧರ್ಮ ಮನೆಯ ಒಳಗೆ ಇರಬೇಕೇ ಹೊರತು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದರು. ಬಿಜೆಪಿಯ ಕೆಲವು ಅಂಗ ಸಂಸ್ಥೆಗಳು ಕೇಸರಿ ಶಾಲಿನ ವಿಚಾರದಲ್ಲಿ ಗಲಾಟೆ ಮಾಡುತ್ತಿವೆ. ಕೆಲವು ಮುಸ್ಲಿಂ ಮತಾಂಧರು ಹಿಜಾಬ್ ಹೆಸರಿನಲ್ಲಿ ಗಲಾಟೆ ಸೃಷಿಸಿವೆ. ಹಿಜಾಬ್, ಕೇಸರಿ ಶಾಲಿಗಿಂತ ಶಿಕ್ಷಣ ದೊಡ್ಡದು. ಹಿಜಾಬ್, ಕೇಸರಿ ಶಾಲು ಮನೆ ಒಳಗೆ ಹಾಕಿಕೊಂಡು ಓಡಾಡಿ.ಅದನ್ನು ಶಾಲಾ-ಕಾಲೇಜುಗಳಿಗೆ ತರುವುದು ಬೇಡ ಎಂದು ನುಡಿದರು. 

ಸಮವಸ್ತ್ರ ಧರಿಸುವ ವಿಚಾರದಲ್ಲಿ ಧರ್ಮದ ಸಂಕೇತ ಎಂದು ಬಿಂಬಿಸುವುದು ಬೇಡ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಕ್ಕಳನ್ನು ಉಪಯೋಗಿಸಿಕೊಳ್ಳಬೇಡಿ. ಶಿಕ್ಷಣ ಕ್ಷೇತ್ರದಲ್ಲಿ ವೋಟಿನ ರಾಜಕಾರಣ ಬೆರಸಿ ಹಾಳು ಮಾಡಬಾರದು ಎಂದು ಸ್ವಪಕ್ಷೀಯ-ವಿಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News