ರಾಜ್ಯಸಭೆ ಮಾದರಿಯಲ್ಲೇ ಇನ್ನು ಮುಂದೆ ಪರಿಷತ್ ಕಲಾಪ: ಸಭಾಪತಿ ಬಸವರಾಜ ಹೊರಟ್ಟಿ

Update: 2022-02-12 12:53 GMT
ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು, ಫೆ. 12: 'ಸದನದ ಕಲಾಪ ವಾರ್ಷಿಕ 60 ದಿನಗಳ ಕಾಲ ನಡೆಸಬೇಕೆಂಬ ನಿಯಮವಿದ್ದರೂ ಇತ್ತೀಚಿನ ದಿನಗಳಲ್ಲಿ ಅಷ್ಟು ದಿನಗಳ ಅವಧಿ ಅಧಿವೇಶನ ನಡೆಸಲು ಆಗಿಲ್ಲ. ಇನ್ನು ಮುಂದೆ ಅದಕ್ಕೆ ಅವಕಾಶ ನೀಡದೆ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಲು ಸರಕಾರಕ್ಕೆ ತಿಳಿಸಲಾಗುವುದು' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "2017ರಲ್ಲಿ 40 ದಿನ, 2018ರಲ್ಲಿ 28 ದಿನ, 2019ರಲ್ಲಿ 20 ದಿನ, 2020ರಲ್ಲಿ 33 ದಿನ ಹಾಗೂ 2021ರಲ್ಲಿ 41 ದಿನ ಸದನ ನಡೆದಿದೆ. ಸದನ ಹೆಚ್ಚು ದಿನಗಳ ಕಾಲ ನಡೆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಸದಸ್ಯರು ಅಧಿವೇಶನದಲ್ಲಿ ಹೆಚ್ಚು ಚರ್ಚೆ ನಡೆಸಲು ಅವಕಾಶ ಸಿಗಲಿದೆ" ಎಂದು ಹೇಳಿದರು.

"ಪರಿಷತ್ತಿಗೆ ತನ್ನದೆ ಆದ ಗೌರವವಿದೆ. ಇಲ್ಲಿ ಮಹತ್ವ ವಿಷಯಗಳು ಚರ್ಚೆ ಆಗುತ್ತವೆ. ವಿಧಾನಸಭೆಯಲ್ಲಿ ಚರ್ಚಿತವಾದ ವಿಷಯಗಳು, ಅನುಮೋದಿಸಿದ ವಿಧೇಯಕಗಳ ಮೇಲೆ ಮೇಲ್ಮನೆಯಲ್ಲಿ ಚರ್ಚೆಯಾಗಿ ಅನುಮೋದನೆಗೊಳ್ಳುತ್ತವೆ. ಹೀಗಿರುವ ಸಮಯದಲ್ಲಿ ಸದನದ ಕಲಾಪಗಳಿಗೆ ಯಾವುದೇ ಧಕ್ಕೆ ಬರದ ಹಾಗೆ ಎಲ್ಲ ಶಾಸಕರು ಸಹಕರಿಸಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಿ, ಮೇಲ್ಮನೆ ಘನತೆ ಹೆಚ್ಚಿಸುವ ರೀತಿಯಲ್ಲಿ ಕಲಾಪ ನಡೆಸಲು ತೀರ್ಮಾನಿಸಲಾಗಿದೆ" ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಪರಿಷತ್ತಿಗೆ 19 ಮಂದಿ ಹೊಸ ಸದಸ್ಯರು ಆಯ್ಕೆಯಾಗಿ ಬಂದಿದ್ದು, ಫೆ.3 ಮತ್ತು 4ರಂದು ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಪರಿತ್ತಿನ 48 ಮಂದಿ ಶಾಸಕರು ಪಾಲ್ಗೊಂಡಿದ್ದರು. ವಿಧಾನಸಭೆಯ 16ರಿಂದ 18 ಮಂದಿ ಹಾಜರಾಗಿದ್ದರು. ವಿಧೇಯಕ, ವಿತ್ತೀಯ ಕಲಾಪ, ಅಭಿವೃದ್ಧಿಯ ಪಾಲುದಾರನಾಗಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಪಾತ್ರ, ಸ್ಥಾಯಿ ಸಮಿತಿ, ಸದನ ಸಮಿತಿ ಹಾಗೂ ಅವುಗಳ ಕಾರ್ಯ ನಿರ್ವಹಣೆ, ಪ್ರಶ್ನೋತ್ತರ ವೇಳೆ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ಸಾರ್ವಜನಿಕ ಮಹತ್ವದ ವಿಷಯಗಳು, ಶಾಸಕರ ಕಡ್ಡಾಯ ಹಾಜರಾತಿ ಸಹಿತ ಇನ್ನಿತರ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗಿದೆ ಎಂದರು.

ಎಲ್ಲಕ್ಕೂ ಧರಣಿ ಸರಿಯಲ್ಲ: `ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕರುಗಳಿಗೆ ತಮ್ಮದೆ ಆದ ಇತಿ-ಮಿತಿಗಳು, ಜವಾಬ್ದಾರಿಗಳಿರುತ್ತವೆ. ಅದನ್ನು ಅರಿತು ಕಲಾಪದ ವೇಳೆ ಶಾಸಕರು ನಡೆದುಕೊಳ್ಳಬೇಕು, ಎಲ್ಲಕ್ಕೂ ಧರಣಿ ನಡೆಸುವುದನ್ನು ಕೈಬಿಡಬೇಕು, ಧರಣಿ ವೇಳೆ ಬಿತ್ತಿ ಪತ್ರಗಳನ್ನು ಹಂಚಬಾರದು, ಸದನದ ನಿಯಮಗಳನ್ನು ಮೀರಬಾರದು' ಎಂದು ಹೊರಟ್ಟಿ ಸಲಹೆ ಮಾಡಿದರು.

`ಸದನದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸಚಿವರು ಸೀಮಿತವಾದ ಉತ್ತರ ನೀಡಬೇಕು. ಅನಧಿಕೃತ ಚರ್ಚೆಗೆ ತೊಡಗಬಾರದು. ಸದನದಲ್ಲಿ ಮಂಡನೆಯಾಗುವ ವಿಧೇಯಕಗಳ ಮಂಡನೆಗೆ ಸಂಬಂಧಿಸಿದ ವಿಧೇಯಕಗಳನ್ನು ಮೊದಲೇ ನೀಡಬೇಕು. ಈ ಬಗ್ಗೆ ಈಗಾಗಲೇ ಸರಕಾರಕ್ಕೂ ತಿಳಿಸಲಾಗಿದೆ. ಇಂತಹ ವಿಷಯಗಳ ಬಗ್ಗೆ ಎಚ್ಚರ ವಹಿಸಿ ಕಲಾಪಗಳನ್ನು ನಡೆಸಲಾಗುವುದು' ಎಂದು ಅವರು ತಿಳಿಸಿದರು.

ರಾಜ್ಯಸಭೆ ಪದ್ಧತಿ ಅಳವಡಿಕೆ: `ರಾಜ್ಯಸಭೆಯ ಮಾದರಿಯಲ್ಲಿಯೇ ಪರಿಷತ್ತಿನ ಕಲಾಪಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಅಲ್ಲಿ ಅನುಸರಿಸುವ ನಿಯಮಗಳು, ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದಿದ್ದೇವೆ. ಈ ಸಂಬಂಧ ರಾಜ್ಯಸಭೆ ಅಧಿವೇಶನ ನಡೆಯುವ ವೇಳೆ ದಿಲ್ಲಿಗೆ ತೆರಳಿ ಅಲ್ಲಿನ ಕಾರ್ಯಕಲಾಪಗಳನ್ನು ವೀಕ್ಷಿಸಿ ಆ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಬೇಕೆಂದಿದ್ದೇವೆ' ಎಂದು ಬಸವರಾಜ ಹೊರಟ್ಟಿ ನುಡಿದರು.

ಇದನ್ನೂ ಓದಿ: ಕೋವಿಡ್ ಸಂಕಷ್ಟ: ಟೂರಿಸ್ಟ್ ಬಸ್‍ಗಳು ಕೆ.ಜಿಗೆ 45ರೂ.ನಂತೆ ಮಾರಾಟಕ್ಕೆ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News